ತಿರುಮಲ: ಕುಸಿಯುತ್ತಿರುವ ಭಾರತದ ಆರ್ಥಿಕತೆಯ ಬಿಸಿ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರನ ಹುಂಡಿಗೂ ತಟ್ಟಿದ್ದು, 9 ದಿನಗಳು ನಡೆಯುವ ಬ್ರಹ್ಮೋತ್ಸವದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರೂ ಹುಂಡಿ ಹಣ ಸಂಗ್ರಹ ಮಾತ್ರ ಇಳಿಮುಖ ಕಂಡಿದೆ.
ಹೌದು. ಮಂಗಳವಾರ ತಿರುಪತಿ ತಿಮ್ಮಪ್ಪನ 9 ದಿನಗಳ ಬ್ರಹ್ಮೋತ್ಸವಕ್ಕೆ ತೆರೆಬಿದ್ದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಆದರೂ ಕೂಡ ತಿಮ್ಮಪ್ಪನ ಹುಂಡಿ ಕಲೆಕ್ಷನ್ ಮಾತ್ರ ತೀವ್ರವಾಗಿ ಇಳಿಕೆ ಕಂಡಿದೆ. 9 ದಿನಗಳ ಕಾಲ ನಡೆದ ಬ್ರಹ್ಮೋತ್ಸವದಲ್ಲಿ ಸುಮಾರು 7.7 ಲಕ್ಷ ಭಕ್ತಾದಿಗಳು ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಬ್ರಹ್ಮೋತ್ಸವದ ಸಮಯದಲ್ಲಿ 5.9 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಈ ಬಾರಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದರೂ ಕೂಡ ತಿಮ್ಮಪ್ಪನ ಹುಂಡಿ ಸಂಗ್ರಹದ ಹಣ ಮಾತ್ರ ಕಡಿಮೆಯಾಗಿದೆ.
ಕಳೆದ ವರ್ಷ ಹುಂಡಿ ಸಂಗ್ರಹ 20.52 ಕೋಟಿ ರೂಪಾಯಿ ಆಗಿತ್ತು. ಆದರೆ ಈ ಬಾರಿ 20.40 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಬರೋಬ್ಬರಿ 12.75 ಲಕ್ಷ ರೂ. ಹುಂಡಿ ಸಂಗ್ರಹದಲ್ಲಿ ಇಳಿಕೆ ಕಂಡಿದೆ. ಕಳೆದ ಬಾರಿ 2.17 ಲಕ್ಷ ಮಂದಿ ತಿಮ್ಮಪ್ಪನ ಸನ್ನಿಧಾನದಲ್ಲಿ ಮುಡಿ ಕೊಟ್ಟಿದ್ದರು. ಆದರೆ ಈ ಬಾರಿ ಮುಡಿಕೊಟ್ಟವರ ಸಂಖ್ಯೆ 3.23 ಲಕ್ಷಕ್ಕೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಡಿಕೊಟ್ಟ ಭಕ್ತರ ಸಂಖ್ಯೆ ಶೇ.50 ರಷ್ಟು ಹೆಚ್ಚಾಗಿದೆ.
ಈ ಬಾರಿ ದೇವಸ್ಥಾನ 34.01 ಲಕ್ಷ ರುಚಿಕರ ಲಡ್ಡು ಪ್ರಸಾದವನ್ನು ಭಕ್ತರಿಗೆ ಹಂಚಿದೆ. ಕಳೆದ ಬಾರಿ 24.01 ಲಕ್ಷ ಲಡ್ಡು ಪ್ರಸಾದ ಹಂಚಲಾಗಿತ್ತು. ಆದರೂ ಕೂಡ ಹುಂಡಿ ಹಣ ನೀರಿಕ್ಷೆ ಮಾಡಿದ ಮಟ್ಟದಲ್ಲಿ ಸಂಗ್ರಹವಾಗಿಲ್ಲ. ಭಕ್ತರು ಹೆಚ್ಚು ಆಗಮಿಸಿದ್ದರೂ ಹುಂಡಿಯಲ್ಲಿ ಹಣದ ಪ್ರಮಾಣ ಕುಸಿತ ಕಂಡಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿ ತಿಳಿಸಿದ್ದಾರೆ.