ಕಲಬುರಗಿ: ದೇಶದ ಬೆನ್ನೆಲುಬು ರೈತನಿಗೆ ಒಂದಿಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿರುತ್ತವೆ. ಒಮ್ಮೆ ಅತಿವೃಷ್ಠಿ, ಮತ್ತೊಮ್ಮೆ ಅನಾವೃಷ್ಠಿ, ಆಗಾಗ ಪ್ರವಾಹ ಸಂಭವಿಸಿ ಅನ್ನದಾತನ ಬದುಕು ಅಂಧಕಾರದಿಂದ ಹೊರ ಬರುತ್ತಿಲ್ಲ. ಇದರ ಮಧ್ಯೆ ಕಳಪೆ ಬೀಜದ ಕಂಪನಿಗಳ ಹಾವಳಿ ರೈತರನ್ನು ಮುಕ್ಕಿ ತಿನ್ನುತ್ತಿವೆ.
ನಂದೂರ ಗ್ರಾಮದ ರೈತ ಶಿವಲಿಂಗಪ್ಪ ಖೇಣಿ ಎರಡು ತಿಂಗಳ ಹಿಂದೆ ಕಲಬುರಗಿ ನಗರದ ಕಾಳಿಕಾ ಆಗ್ರೋ ಏಜೆನ್ಸಿಯಿಂದ, ಗುಜರಾತ್ ಮೂಲದ ಸಾಗರ ಸೀಡ್ಸ್ ಕಂಪನಿಯ ಶ್ರವಣಿ ಬ್ರ್ಯಾಂಡ್ ಹೆಸರಿನ ಸೌತೆ ಬೀಜ ತಂದು ಬಿತ್ತನೆ ಮಾಡಿದ್ದಾರೆ. ಪ್ಯಾಕೇಟ್ ಒಂದಕ್ಕೆ 450 ರೂ. ಕೊಟ್ಟು ಸೌತೆ ಬೀಜ ತಂದಿದ್ದಾರೆ. ಬಿತ್ತನೆ ಮಾಡಿ ರಸಗೊಬ್ಬರ ನೀಡಿ ನೀರು ಹರಿಸಿದ್ರು ಬೀಜ ಸರಿಯಾಗಿ ಮೊಳಕೆ ಒಡೆದಿಲ್ಲ. ಶೇಕಡಾ 90ರಷ್ಟು ಬೀಜಗಳು ಮೊಳಕೆ ಒಡೆದಿಲ್ಲ. ಕೇವಲ ಬೆರಳೆಣಿಕೆಯಷ್ಟು ಸಸಿಗಳು ಮಾತ್ರ ಅಲ್ಲೊಂದು ಇಲ್ಲೊಂದು ಬೆಳೆದಿವೆ. ಬೆಳೆದ ಸಸಿಗಳು ಕೂಡ ನೆಲ ಬಿಟ್ಟು ಮೇಲೆದ್ದಿಲ್ಲ, ಫಸಲು ಕೊಟ್ಟಿಲ್ಲ. ಹೀಗಾಗಿ ಕಂಗಾಲಾಗಿರುವ ರೈತ ಶಿವಲಿಂಗಪ್ಪ ಖೇಣಿ ಕಳಪೆ ಬೀಜದಿಂದ ಈ ರೀತಿ ಆಗಿದೆ ಅಂತಾ ಆರೋಪಿಸಿ ಕಣ್ಣೀರು ಹಾಕುತ್ತಿದ್ದಾರೆ.
ಸುಮಾರು 1 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ರೈತ ಶಿವಲಿಂಗಪ್ಪ, ಗೊಬ್ಬರ, ಕೂಲಿ ಆಳು ಸೇರಿದಂತೆ ಈಗಾಗಲೇ ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಇವರ ಜೊತೆಗೆ ಸುತ್ತಲಿನ ನಾಲ್ಕೈದು ರೈತರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಕಳಪೆ ಬೀಜದಿಂದ ನಮ್ಮ ಬದುಕು ಬರ್ಬಾದ್ ಆಗ್ತಿದೆ ಅಂತಾ ಬೀಜ ಕಂಪನಿ ವಿರುದ್ದ ಅನ್ನದಾತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಸೂಕ್ತ ಪರಿಹಾರ ನೀಡಬೇಕು ಅಂತಾ ಆಗ್ರಹಿಸಿದ್ದಾರೆ.
ಸದ್ಯ ಇದೀಗ ರೈತರ ದೂರಿನ ಹಿನ್ನೆಲೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೀಜದ ಮಾದರಿ ಸಂಗ್ರಹಿಸಿ ಪ್ರಯೋಗಲಾಯಕ್ಕೆ ಕಳಿಸಿದ್ದಾರೆ. ಈ ಹಿಂದೆಯೂ ಜಿಲ್ಲೆಯಲ್ಲಿ ಕಳಪೆ ಬೀಜ ಕಂಪನಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳಿವೆ. ಆದರೂ ನಕಲಿ ಕಂಪನಿಗಳ ಹಾವಳಿ ಮಾತ್ರ ಇನ್ನೂ ನಿಂತಿಲ್ಲ. ದೇಶಕ್ಕೆ ಅನ್ನ ನೀಡುವ ಅನ್ನದಾತನ ಹೊಟ್ಟೆಗೆ ನಕಲಿ ಕಂಪನಿಗಳು ಬರೆ ಎಳೆಯುತ್ತಿವೆ.