ಬೆಳಗಾವಿ/ಚಿಕ್ಕೋಡಿ: ಅಸಲಿ ಜಾತಿ ಪ್ರಮಾಣ ಪತ್ರ ಪಡೆಯುವರು ಸಾಕಷ್ಟು ಬಾರಿ ತಹಶೀಲ್ದಾರ್ ಕಚೇರಿ ಅಲೆದಾಡಿದ ಮೇಲೆ ಕೊನೆಗೆ ಪ್ರಮಾಣ ಪತ್ರ ಪಡೆದುಕೊಳ್ಳುತ್ತಾರೆ. ಆದರೆ ಈ ತಾಲೂಕಿನಲ್ಲಿ ಅಸಲಿಗಿಂತ ನಕಲಿ ಪ್ರಮಾಣ ಪತ್ರ ಸಲೀಸಾಗಿ ದೊರೆಯುತ್ತಿದೆ. ಜನರಿಗೆ ಯಾವುದು ಬೇಕೋ ಆ ಜಾತಿಯ ಪ್ರಮಾಣ ಪತ್ರವನ್ನು ಯಾವುದೇ ದಾಖಲೆಗಳಿಲ್ಲದೆ ನೀಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯ ಸದಸ್ಯರು ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸದಲಗಾ ಪುರಸಭೆಯ 11ನೇ ವಾರ್ಡಿನಲ್ಲಿ ಅವಿರೋಧವಾಗಿ ಆಯ್ಕೆಯಾದ ರವಿ ಗೋಸಾವಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ಅವರ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ.
Advertisement
Advertisement
ಚಿಕ್ಕೋಡಿ ತಾಲೂಕಿನ ತಹಶೀಲ್ದಾರ್ ಅವರು ಯಾವುದೇ ದಾಖಲೆ ಇಲ್ಲದೇ ಪ್ರವರ್ಗ 2ಎ ಅಲ್ಲಿ ಬರುತ್ತಿದ್ದ ಹಿಂದೂ ಗೋಸಾವಿ ಭಟಕಿ ಜಮಾತ ಜಾತಿಯಿಂದ ಎಸ್‍ಟಿ ಪರಿಶಿಷ್ಟ ಪಂಗಡಕ್ಕೆ ಯಾವುದೇ ದಾಖಲೆಗಳಿಲ್ಲದೇ ಬದಲಾಯಿಸಿಕೊಂಡಿದ್ದಾರೆ. ರವಿ ಗೋಸಾವಿಯಿಂದ ಯಾವುದೇ ಶಾಲಾ ಹಾಗೂ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪಡೆಯದೇ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
Advertisement
Advertisement
ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ವರ್ಗದಲ್ಲಿ ಯಾವುದೇ ಮುಖಂಡರು ಇಲ್ಲದನ್ನು ಗಮನಿಸಿ ರವಿ ಗೋಸಾವಿ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಲಿಂಕ್ ಹಿಡಿದು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾನೆ. ನಂತರ ವಾರ್ಡ್ ನಂ.11 ಎಸ್‍ಟಿ ಮೀಸಲು ವಾರ್ಡ್‍ನಿಂದ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯ ಪುರಸಭೆ ಸದಸ್ಯರಿಗೆ ಈತನ ಅಸಲಿ ಬಂಡವಾಳ ಗೊತ್ತಾಗಿ ಈತನ ಜಾತಿ ಪ್ರಮಾಣ ಪತ್ರದ ಎಲ್ಲ ದಾಖಲೆಗಳನ್ನ ಸಂಗ್ರಹಿಸಿ ಈತನ ಸದಸ್ಯತ್ವ ರದ್ದು ಮಾಡುವಂತೆ ಎಚ್ಚರಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ರಾಜಕೀಯ ಮುಖಂಡರ ಮಾತು ಕೇಳಿ ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಲಾಗಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಲಗಾ ಬಿಜೆಪಿ ಪುರಸಭೆ ಸದಸ್ಯರು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv