ರಾಯಚೂರು: ಜಿಲ್ಲೆಯಲ್ಲಿ ಬ್ರ್ಯಾಂಡೆಡ್ ವಸ್ತುಗಳ ನಕಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಸಿರವಾರ ತಾಲೂಕಿನ ಬಾಲಾಜಿ ಕ್ಯಾಂಪ್‍ನಲ್ಲಿ ನಕಲಿ ಚಹಾಪುಡಿ, ಕೊಬ್ಬರಿ ಎಣ್ಣೆ, ಫೆವಿಕಾಲ್, ಡಿಟರ್‌ಜೆಂಟ್ ಪೌಡರ್ ತಯಾರಿಸಿ ಬ್ರ್ಯಾಂಡೆಡ್ ಕಂಪನಿ ಲೆಬಲ್ ಹಾಕಿ ಜಿಲ್ಲೆಯ ಹಲವೆಡೆ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದು, ರತನ್ ಸಿಂಗ್, ರಾಘವೇಂದ್ರ ಬಂಧಿತ ಆರೋಪಿಗಳು. ಪೊಲೀಸ್ ದಾಳಿ ವೇಳೆ 16 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. ನಕಲಿ ಉತ್ಪನ್ನಗಳ ಪ್ಯಾಕೆಟ್‍ಗಳು, ಪ್ಯಾಕಿಂಗ್ ಯಂತ್ರಗಳು, ಬುಲೆರೋ ಪಿಕಪ್ ವಾಹನ ಹಾಗೂ ಕಚ್ಚಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎಟಿಎಂನಲ್ಲಿ ಬಂತು 5 ಪಟ್ಟು ಹೆಚ್ಚು ಕ್ಯಾಶ್! – ಸುದ್ದಿ ಕೇಳುತ್ತಲೇ ಮುಗಿಬಿದ್ರು ಜನ
ಮೂರ್ನಾಲ್ಕು ತಿಂಗಳಿಂದ ಗ್ರಾಮದ ಹಳೆಯ ರೆಸಿಡೆನ್ಸಿ ಶಾಲೆಯೊಂದರ ಕೊಠಡಿಯಲ್ಲಿ ನಕಲಿ ದಂಧೆ ನಡೆದಿದೆ. ತಮ್ಮದೇ ಆದ ಮಾರ್ಕೆಟಿಂಗ್ ಜಾಲವನ್ನು ಇಟ್ಟುಕೊಂಡು ಗ್ರಾಮೀಣ ಭಾಗದಲ್ಲಿ ಅಸಲಿ ವಸ್ತುಗಳೆಂದೇ ಮಾರಾಟ ಮಾಡುತ್ತಿದ್ದರು. ಇದೀಗ ಪೊಲೀಸರು ನಕಲಿ ಮಾರಾಟ ದಂಧೆಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.