ಬೆಂಗಳೂರು: ನನ್ನ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡಿ ಕಿರುಕುಳ ನೀಡಲು ನಾಗರತ್ನ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದು, ಈಗಲಾದರೂ ಮಕ್ಕಳ ಭವಿಷ್ಯ ಚಿಂತಿಸಿ ಪೊಲೀಸರ ಮುಂದೆ ಬರಲಿ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ ವಿಡಿಯೋ ಆಧಾರಿಸಿ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದಂತೆ ನಾಗರತ್ನ ಮನೆಯಿಂದ ಮಗನೊಂದಿಗೆ ಕಾಣೆಯಾಗಿದ್ದಾರೆ. ಸದ್ಯ ಪುತ್ರಿ ಮೋನಿಕಾರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಪ್ರಕರಣದಲ್ಲಿ ನನ್ನ ಮಕ್ಕಳು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅದನ್ನು ನೋಡಲು ನನಗೆ ಆಗುತ್ತಿಲ್ಲ. ಮಗಳಿಗೆ 18 ವರ್ಷ ತುಂಬಿದ್ದು ಈ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದೆ. ಈಗಾಲಾದ್ರು ನಾಗರತ್ನ ಯೋಚನೆ ಮಾಡಬೇಕಿದೆ ಎಂದು ಭಾವುಕರಾದ ಅವರು, ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಕುರಿತು ಯೋಚನೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳುತ್ತೇನೆ ಅಂದ್ರು.
ಈ ವೇಳೆ ಮಾಧ್ಯಮಗಳಿಂದ ಮಗಳ ಮೇಲೆ ಆರೋಪ ಬಂದಿರುವ ಕುರಿತು ರಾಜಿ ಮಾಡಿಕೊಳ್ಳುತ್ತಿರಾ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ, ಎಲ್ಲವೂ ಮಕ್ಕಳನ್ನ ಮುಂದೆ ಇಟ್ಟು ಮಾಡುತ್ತಿದ್ದಾರೆ. ಕೆಲ ಆಪ್ತರ ಮಾತು ಕೇಳಿ ನಾಗರತ್ನ ಅವರು ಈ ರೀತಿ ವರ್ತಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ಕುರಿತು ಚಿಂತಿಸಬೇಕಿದೆ ಎಂದು ಹೇಳಿ ಹೊರಟು ಹೋದರು.
ನಾಗರತ್ನ ಬಂಧನ ಖಚಿತ:
ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಪರ ವಕೀಲ ಶಿವಕುಮಾರ್, ನಾಗರತ್ನ ಅವರು ಇಷ್ಟಾದರೂ ಮಕ್ಕಳ ಭವಿಷ್ಯದ ಬಗ್ಗೆ ಲೆಕ್ಕಿಸದೆ ಈ ರೀತಿ ವರ್ತಿಸುತ್ತಿದ್ದಾರೆ. ನಾಗರತ್ನ ಅವರ ವಿರುದ್ಧ ಕೀರ್ತಿ ಅವರು ದೂರು ನೀಡಿದ್ದು, ವಿಜಯ್ ನೀಡಿಲ್ಲ. ಪ್ರಕರಣದಲ್ಲಿ ಮೋನಿಕಾ ಆರೋಪಿ ಆಗಿದ್ದಾರೆ. ಆದರೆ ದೂರಿನಲ್ಲಿ ಕೀರ್ತಿ ಅವರು ಮೋನಿಕಾ ಹೆಸರು ಕೈಬಿಟ್ಟರೂ ಪೊಲೀಸರು ಹಾಗೂ ಕಾನೂನು ಅದನ್ನು ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ನಾಗರತ್ನ ಅವರು ಎಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಕಾನೂನು ನಿಯಮ ಅಡಿ ಎಲ್ಲವೂ ನಡೆಯಲಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv