ಬೆಂಗಳೂರು: ದುನಿಯಾ ವಿಜಿ ಕುಟುಂಬ ಇಂದು ಬೆಂಗಳೂರು ದಕ್ಷಿಣ ಡಿಸಿಪಿ ಅಣ್ಣಾಮಲೈ ಎದುರು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದೆ.
ಪದೇ ಪದೇ ಗಲಾಟೆ ಮಾಡಿಕೊಂಡು ಕಾನೂನು ಸುವ್ಯವಸ್ಥೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 107ರ ಅಡಿ ಗಿರಿನಗರ ಪೊಲೀಸರು ದುನಿಯಾ ವಿಜಿ, ನಾಗರತ್ನ ಸೇರಿದಂತೆ 7 ಮಂದಿಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.
ಈ ಪ್ರಕರರಣಕ್ಕೆ ಸಂಬಂಧಿಸಿದಂತೆ ವಿಜಯ್ ಹಾಗೂ ಕುಟುಂಬ ಸದಸ್ಯರು ಇಂದು ವಿಚಾರಣೆಗೆ ಹಾಜರಾಗಿದ್ದರು. ವಿಜಯ್, 2ನೇ ಪತ್ನಿ ಕೀರ್ತಿಗೌಡ ಹಾಗೂ ಕುಟುಂಬಸ್ಥರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ವಿಜಯ್, ಎಲ್ಲರು ನಮ್ಮ ಹೇಳಿಕೆ ನೀಡಿದ್ದೇವೆ. ಪ್ರಕರಣ ವಿಚಾರಣೆ ಹಂತದಲ್ಲಿದೆ. ನಾನು ಯಾವುದೇ ಕಾರಣಕ್ಕೂ ಸಾರ್ವಜನಿಕರಿಗಾಗಲಿ, ಕಾನೂನಿಗಾಗಲಿ ಧಕ್ಕೆ ತರಲ್ಲ. ಶಾಂತಿ ಕದಡುವ ಪ್ರಯತ್ನ ಮಾಡಲ್ಲ. ಪೊಲೀಸರು ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಿ ಕೈ ಮುಗಿದು ಎಲ್ಲರಿಗೂ ಒಳ್ಳೆದಾಗಲಿ ಎಂದು ಹೇಳಿದರು.
ಇನ್ನು ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಸಂಬಂಧ ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ನಾಗರತ್ನ ಸದ್ಯಕ್ಕೆ ರಿಲ್ಯಾಕ್ಸ್ ಆಗುವ ಹಾಗಿಲ್ಲ. ಯಾಕಂದ್ರೆ ನಾಗರತ್ನ ಮೇಲೆ ಕೂಡ ಗಿರಿನಗರ ಪೊಲೀಸರು ಸಿಆರ್‍ಪಿಸಿ ಸೆಕ್ಷನ್ 107 ಹಾಕಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ನಾಗರತ್ನ ಕೂಡ ಅಣ್ಣಾಮಲೈ ಮುಂದೆ ಹಾಜರಾಗಿ ಬಾಂಡ್ ನೀಡಿ ಮುಚ್ಚಳಿಕೆ ಬರೆದು ಕೊಡಬೇಕು. ಇಷ್ಟು ದಿನ ನಾಪತ್ತೆಯಾಗಿದ್ದ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಶೀಘ್ರದಲ್ಲೇ ಪೊಲೀಸರು ಅವರನ್ನು ಡಿಸಿಪಿ ಎದುರು ಹಾಜರಾಗಲು ನೋಟೀಸ್ ನೀಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv