Connect with us

Bengaluru City

ದುನಿಯಾ ವಿಜಯ್ ಈಗ ಸಲಗ!

Published

on

ಬೆಂಗಳೂರು: ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಕುಸ್ತಿ ಚಿತ್ರ ಮೂಡಿ ಬರೋದಾಗಿ ಈ ಹಿಂದೆ ಸುದ್ದಿಯಾಗಿತ್ತು. ಆದರೆ ಅದಾದ ಕೆಲ ದಿನಗಳಲ್ಲಿಯೇ ಕುಸ್ತಿ ನಿಂತು ಹೋಗಿದೆ ಎಂದೂ ರೂಮರ್ ಹರಿದಾಡಿತ್ತು. ಆದರೆ ಕುಸ್ತಿ ನಿಂತಿಲ್ಲ ಮುಂದಕ್ಕೆ ಹೋಗಿದೆ ಅಂತ ಸ್ಪಷ್ಟೀಕರಣ ನೀಡಿದ್ದ ರಾಘು, ಈ ಗ್ಯಾಪಲ್ಲಿ ತಾವು ದುನಿಯಾ ವಿಜಿಗಾಗಿ ಮತ್ತೊಂದು ಚಿತ್ರ ನಿರ್ದೇಶನ ಮಾಡುತ್ತಿರೋದಾಗಿ ಹೇಳಿಕೊಂಡಿದ್ದರು. ಇದೀಗ ಆ ಚಿತ್ರದ ಟೈಟಲ್ ಅನಾವರಣಗೊಂಡಿದೆ!

ಈ ಚಿತ್ರಕ್ಕೆ ಸಲಗ ಎಂಬ ನಾಮಕರಣವಾಗಿದೆ. ಇದರ ಟೈಟಲ್ ಡಿಸೈನ್ ಕೂಡಾ ಹೊರ ಬಂದಿದೆ. ಹೊಸಾ ಶೈಲಿಯಲ್ಲಿ, ಕ್ರಿಯೇಟಿವ್ ಆಗಿ ಮಾಡಲಾಗಿರೋ ಈ ಟೈಟಲ್ ಡಿಸೈನಿಗೆ ನಿಜಕ್ಕೂ ಒಂದು ಫೋರ್ಸ್ ಇದೆ. ಈ ಚಿತ್ರದ ಮೂಲಕವೇ ದುನಿಯಾ ವಿಜಯ್ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತಾರೆಂಬಂಥಾ ಸೂಚನೆಯೂ ಹೊಮ್ಮುವಂತಿದೆ. ಅಂದ ಹಾಗೆ ಈ ಚಿತ್ರಕ್ಕೆ ರಾಘು ಶಿವಮೊಗ್ಗ ವಿಶಿಷ್ಟವಾದೊಂದು ಕಥೆಯನ್ನ ಸಿದ್ಧಪಡಿಸಿಕೊಂಡಿದ್ದಾರಂತೆ. ಈ ಚಿತ್ರದ ಫಸ್ಟ್ ಲುಕ್ ಜನವರಿ ಒಂದರಂದು ಬಿಡುಗಡೆಯಾಗಲಿದೆ.

 

ಸಲಗಕ್ಕೆ ಹೊಸಾ ವರ್ಷದಿಂದಲೇ ಚಿತ್ರೀಕರಣ ನಡೆಯುತ್ತಿದೆ. ಹಾಗಾದರೆ ಕುಸ್ತಿ ಚಿತ್ರದ ಕಥೆಯೇನು ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೂ ಕೂಡಾ ರಾಘು ಉತ್ತರ ನೀಡಿದ್ದಾರೆ. ಬಹುಶಃ ಕುಸ್ತಿ ಮಾಮೂಲಿ ಚಿತ್ರವಾಗಿದ್ದರೆ ಈ ಹೊತ್ತಿಗೆಲ್ಲಾ ದುನಿಯಾ ವಿಜಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರೇನೋ. ಆದರೆ ಅವರು ಈ ಚಿತ್ರಕ್ಕಾಗಿ ನಡೆಸಿದ್ದ ಬಾಡಿ ಬಿಲ್ಡ್, ಕುಸ್ತಿ ತರಬೇತಿಗಳೆಲ್ಲ ವೈಯಕ್ತಿಕ ವಿವಾದಗಳಿಂದ ನಿಂತು ಹೋಗಿವೆ. ಇನ್ನು ಹೊಸದಾಗಿಯೇ ಆರಂಭ ಮಾಡಬೇಕಷ್ಟೇ. ಇನ್ನು ವಿಜಿ ಮಗ ಸಾಮ್ರಾಟ್ ಕೂಡಾ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಲು ರೆಡಿಯಾಗುತ್ತಿದ್ದ. ಆತನಿಗೂ ತರಬೇತಿ ಕೊಡಿಸಲಾಗುತ್ತಿತ್ತು. ಅದೂ ಕೂಡಾ ಬ್ರೇಕಾಗಿದೆ.

ಈಗ ಅಪ್ಪ ಮಗನಿಗೆ ಈ ತರಬೇತಿಗಳನ್ನು ಹೊಸತಾಗಿ ಕೊಡಿಸಿ ರೆಡಿಯಾಗಿಸೋ ಕೆಲಸವೂ ಸಲಗ ಚಿತ್ರದ ಜೊತೆಗೇ ನಡೆಯಲಿದೆ. ಸಾಮ್ರಾಟ್ ಗೆ ಇನ್ನೇನು ಶಾಲಾ ಪರೀಕ್ಷೆಗಳು ಶುರುವಾಗೋದರಿಂದ ಅದೂ ಕೂಡಾ ಕಷ್ಟ ಸಾಧ್ಯ. ಆದ್ದರಿಂದಲೇ ದುನಿಯಾ ವಿಜಿ ಮತ್ತು ರಾಘು ಸೇರಿ ಚರ್ಚೆ ನಡೆಸಿ ಕುಸ್ತಿ ಚಿತ್ರವನ್ನು ಮುಂದಿನ ವರ್ಷದಿಂದ ಆರಂಭಿಸಲು ನಿರ್ಧಾರ ಮಾಡಿದ್ದಾರೆ. ಸಲಗ ಚಿತ್ರ ಮುಗಿಯೋ ಹೊತ್ತಿಗೆಲ್ಲ ಕುಸ್ತಿಯೂ ಆರಂಭವಾಗಲಿದೆ…!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *