ಎಕ್ಕ ಸಿನಿಮಾ (Ekka Film) ಬೆನ್ನಲ್ಲೇ ಹೊಸ ಸಿನಿಮಾವೊಂದನ್ನು ಯುವ ರಾಜ್‌ಕುಮಾರ್ (Yuva Rajkumar) ಒಪ್ಪಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಸೂರಿ (Soori) ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಯುವಗೆ ದುನಿಯಾ ವಿಜಯ್ ಪುತ್ರಿಗೆ ರಿತನ್ಯಾ (Rithnya Vijay Kumar) ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್
ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ಯುವರಾಜ್‌ಕುಮಾರ್ ಹಾಗೂ ನಿರ್ದೇಶಕ ಸೂರಿ ಸಿನಿಮಾಗೆ ಇಂದು (ಏ.30) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್‌ಕುಮಾರ್ ಕ್ಲ್ಯಾಪ್ ಮಾಡಿದ್ದಾರೆ. ಅಪ್ಪು ಅವರ ಮಗಳು ಧೃತಿ ಕ್ಯಾಮೆರಾಗೆ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಫ್ಯಾಮಿಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಇದನ್ನೂ ಓದಿ:ಯಶ್ ತಾಯಿ ನಿರ್ಮಾಣದ ಸಿನಿಮಾದಲ್ಲಿ ಪೃಥ್ವಿ ಅಂಬರ್- ’ಕೊತ್ತಲವಾಡಿ’ ಚಿತ್ರದ ಪೋಸ್ಟರ್ ಔಟ್
ದುನಿಯಾ, ಕೆಂಡಸಂಪಿಗೆ, ಬ್ಯಾಡ್ ಮ್ಯಾನರ್ಸ್, ಟಗರು ಸಿನಿಮಾಗಳ ಮೂಲಕ ಸಕ್ಸಸ್ ಕಂಡಿರೋ ಸೂರಿ ಗರಡಿಯಲ್ಲಿ ಯುವ ಅವರು ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲ ಫ್ಯಾನ್ಸ್‌ಗೆ ಇದೆ. ದುನಿಯಾ ವಿಜಯ್ (Duniya Vijay) ಮೊದಲ ಪುತ್ರಿ ರಿತನ್ಯಾ ಈ ಚಿತ್ರದ ನಾಯಕಿಯಾಗಿದ್ದಾರೆ. ಈಗಾಗಲೇ ಅಪ್ಪನ ಜೊತೆ ‘ಲ್ಯಾಂಡ್ ಲಾರ್ಡ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ರಿತನ್ಯಾಗೆ ಇದು ಎರಡನೇ ಸಿನಿಮಾವಾದರೆ, ಯುವ ರಾಜ್‌ಕುಮಾರ್‌ಗೆ ಇದು ಮೂರನೇ ಚಿತ್ರವಾಗಿದೆ.
ಸೂರಿ ಗರಡಿಯಲ್ಲಿ ಖಾಯಂ ಆಗಿ ಕೆಲಸ ಮಾಡುವ ದೀಪು ಎಸ್ ಕುಮಾರ್ ಸಂಕಲನ, ಚರಣ್ ರಾಜ್ ಸಂಗೀತ ನಿರ್ದೇಶನ, ಸಂತೋಷ್ ಕಲಾ ನಿರ್ದೇಶನ, ಶೇಖರ್ ಕ್ಯಾಮೆರಾ ವರ್ಕ್ ಈ ಚಿತ್ರಕ್ಕೆ ಇರಲಿದೆ. ಮೇ ತಿಂಗಳಾತ್ಯಂತಕ್ಕೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಬರುತ್ತಿರುವ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಗಲಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ, ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್ ಬ್ಯಾನರ್‌ನಡಿ ‘ಎಕ್ಕ’ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್ ನಡಿ ಹೊಸ ಸಿನಿಮಾ ಘೋಷಣೆಯಾಗಿದೆ.