ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ 4 ಆರೋಪಿಗಳ ಜಾಮೀನು ಅರ್ಜಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿದೆ.
ಜಿಮ್ ಟ್ರೈನರ್ ಮಾರುತಿಗೌಡ ಮೇಲಿನ ಹಲ್ಲೆ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದುನಿಯಾ ವಿಜಯ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಹಲ್ಲೆಗೆ ಒಳಗಾದ ಮಾರುತಿಗೌಡ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ನ್ಯಾ.ಮಹೇಶ್ ಬಾಬು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
Advertisement
ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಸೆಪ್ಟೆಂಬರ್ 26 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಸೋಮವಾರದ ವಿಚಾರಣೆ ವೇಳೆ ಸರ್ಕಾರಿ ವಕೀಲರು, ವಿಜಯ್ ರಕ್ತ ಬರುವಂತೆ ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪ್ರಭಾವಿ ವ್ಯಕ್ತಿಯೂ ಆಗಿದ್ದಾರೆ. ಈ ರೀತಿಯಾಗಿ ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ಇವರಿಗೆಲ್ಲ ಒಂದು ಪಾಠವಾಗುವ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಬೇಡಿ ಎಂದು ವಾದ ಮಂಡಿಸಿದ್ದರು.
Advertisement
Advertisement
ದುನಿಯಾ ವಿಜಿ ಪರ ವಕೀಲರು, ಜಾಮೀನು ಸಿಗಬಾರದು ಎನ್ನುವ ಕಾರಣಕ್ಕಾಗಿ ಪೊಲೀಸರು ಉದ್ದೇಶಪೂರ್ವಕವಾಗಿ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಹಾಕಿರುವ ಕೇಸ್ ಬೇರೆ, ವಿಕ್ರಮ್ ಆಸ್ಪತ್ರೆಗೆ ಅಡ್ಮಿಟ್ ಅದಾಗ ಹಾಕಿರುವ ಕೇಸ್ ಬೇರೆ ಎನ್ನುವ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದರು.
Advertisement
ವಿಜಯ್ ಯಾವುದೇ ಅಸ್ತ್ರ ಬಳಸಿ ಹಲ್ಲೆ ನಡೆಸಿಲ್ಲ. ಅಸ್ತ್ರ ಹಿಡಿದುಕೊಂಡು ಓಡಾಡುವುದಕ್ಕೆ ಅವರೇನು ರೌಡಿ ಶೀಟರ್ ಅಲ್ಲ. ಆ ಕ್ಷಣದಲ್ಲಿ ಜಗಳ ನಡೆದಿದ್ದು, ಹಲ್ಲೆ ನಡೆಸಲೆಂದೇ ವಿಜಿ ಅಲ್ಲಿಗೆ ಬಂದಿಲ್ಲ. ಮಾತು ಮಾತಿಗೆ ಬೆಳೆದು ಜಗಳ ದೊಡ್ಡದಾಗಿದೆ. ವಿಜಯ್ ಸಿನಿಮಾ ನಟ ಎನ್ನುವ ಕಾರಣ ವಿಚಾರವನ್ನು ದೊಡ್ಡದು ಮಾಡಿದ್ದಾರೆ. ಹೀಗಾಗಿ ಜಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು.
ಯಾವೆಲ್ಲ ಕೇಸ್?
ದುನಿಯಾ ವಿಜಯ್ ಮೇಲೆ ಕಿಡ್ನಾಪ್, ಹಲ್ಲೆ, ಕೊಲೆ ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365(ಕಿಡ್ನಾಪ್), 342(ಅಕ್ರಮ ಬಂಧನ)325(ಹಲ್ಲೆ) 506(ಕೊಲೆ ಬೆದರಿಕೆ) ಪ್ರಕರಣ ದಾಖಲಾಗಿದೆ. ವಿಜಿ ಮೇಲೆ ದಾಖಲಾಗಿರುವ ಆರೋಪಗಳು ಸಾಬೀತಾದಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆಯಾಗುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv