ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ (Duleep Trophy) ಟೂರ್ನಿಯ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ `ಬಿ’ ತಂಡ 321 ರನ್ ಕಲೆಹಾಕಿದೆ. ಆರಂಭಿಕ ಹಿನ್ನಡೆಯ ಹೊರತಾಗಿಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಕೇವಲ 94 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಭಾರತ-ಬಿ ತಂಡ (India B Team) ಕೊನೇ 3 ವಿಕೆಟ್‌ಗಳಲ್ಲಿ 227 ರನ್ ಪೇರಿಸಿದೆ. ಮುಶೀರ್ ಖಾನ್ (Musheer Khan) ಅಮೋಘ ಶತಕದ ಆಸರೆಯೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 116 ಓವರ್‌ಗಳಲ್ಲಿ 321 ರನ್ ಕಲೆಹಾಕಿದೆ. ಭಾರತ `ಎ’ ತಂಡ 2ನೇ ದಿನವಾದ ಶುಕ್ರವಾರ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆರಂಭಿಸಿದೆ.
Advertisement
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ-ಬಿ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು `ಎ’ ತಂಡದ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದರು. ಯಶಸ್ವಿ ಜೈಸ್ವಾಲ್ 30 ರನ್ ಗಳಿಸಿದ್ದು ಬಿಟ್ಟರೆ, ನಾಯಕ ಅಭಿಮನ್ಯು ಈಶ್ವರನ್, ಸರ್ಫರಾಜ್ ಖಾನ್, ರಿಷಬ್ ಪಂತ್ ಒಂದಂಕಿ ಮೊತ್ತಕ್ಕೆ ನೆಲ ಕಚ್ಚಿದರು. ಐಪಿಎಲ್‌ನಲ್ಲಿ ಅಬ್ಬರಿಸಿದ್ದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಶೂನ್ಯ ಸುತ್ತಿದರೆ, ಸಾಯಿ ಕಿಶೋರ್ 1 ರನ್‌ಗಳಿಗೆ ಔಟಾದರು.
Advertisement
Advertisement
ಇದರಿಂದ ಭಾರತ `ಬಿ’ ತಂಡ 94 ರನ್‌ಗಳಿಗೆ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 150 ರನ್ ಕಲೆಹಾಕುವುದೂ ಕಷ್ಟವಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಮುಶೀರ್ ಖಾನ್ ಹಾಗೂ ನವದೀಪ್ ಸೈನಿ ಪಂದ್ಯದ ದಿಕ್ಕನ್ನೇ ಬದಲಿಸಿದರು. 2ನೇ ದಿನವೂ ಉತ್ತಮ ಇನ್ನಿಂಗ್ಸ್ ಕಟ್ಟಿದ ಮುಶೀರ್ – ಸೈನಿ ಜೋಡಿ ಬರೋಬ್ಬರಿ 205 ರನ್‌ಗಳ ಜೊತೆಯಾಟ ನೀಡಿದರು. ಆದ್ರೆ ದ್ವಿಶತಕದ ಅಂಚಿನಲ್ಲಿದ್ದ ಮುಶೀರ್ ಖಾನ್, ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಲು ಯತ್ನಿಸಿ ಬೌಂಡರಿಲೈನ್ ಬಳಿ ಕ್ಯಾಚ್‌ಗೆ ತುತ್ತಾದರು. ಈ ವೇಳೆ ನವದೀಪ್ ಸೈನಿ ಸಹ ಅರ್ಧಶತಕ ದಾಖಲಿಸಿ ಮಿಂಚಿದರು.
ಭಾರತ-ಬಿ ತಂಡದ ಪರ ಮುಶೀರ್ ಖಾನ್ 373 ಎಸೆತಗಳಲ್ಲಿ 181 ರನ್ (16 ಬೌಂಡರಿ, 5 ಸಿಕ್ಸರ್) ಸಿಡಿಸಿದ್ರೆ, ನವದೀಪ್ ಸೈನಿ 56 ರನ್ (144 ಎಸೆತ, 1 ಸಿಕ್ಸರ್, 8 ಬೌಂಡರಿ), ಯಶಸ್ವಿ ಜೈಸ್ವಾಲ್ 30 ರನ್, ಅಭಿಮನ್ಯು 13 ರನ್, ಯಶ್ ದಯಾಳ್ 10 ರನ್ ಗಳಿಸಿದ್ರೆ, ಉಳಿದ ಬ್ಯಾಟರ್‌ಗಳು ಒಂದಂಕಿಗೆ ಕೈಸುಟ್ಟುಕೊಂಡರು.
ಭಾರತ-ಎ ತಂಡದ ಪರ ವೇಗಿ ಆಕಾಶ್ ದೀಪ್ 4 ವಿಕೆಟ್ ಕಿತ್ತರೆ, ಖಲೀಲ್ ಅಹ್ಮದ್, ಅವೇಶ್ ಖಾನ್ ತಲಾ 2 ವಿಕೆಟ್ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಕಿತ್ತರು.