ತುಮಕೂರು: ನಾನು ಸಾಂದರ್ಭಿಕ ಶಿಶು. ಮುಖ್ಯಮಂತ್ರಿಯಾಗಿ ಮೆರೆಯಬೇಕು ಇಲ್ಲ ಇದೇ ಸ್ಥಾನದಲ್ಲಿ ಮುಂದುವರೆಯಬೇಕು ಅನ್ನೋ ಹುಚ್ಚು ನನಗೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ರಾಜಕೀಯ ಸನ್ನಿವೇಶದಲ್ಲಿ ಅನಿವಾರ್ಯವಾಗಿ ಒಪ್ಪಿಗೆ ನೀಡಿದ್ದೇನೆ. ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎನ್ನುವ ವಿಚಾರ ಮುಗಿದು ಹೋಗಿರುವ ಅಧ್ಯಾಯ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಪರ ವಿರೋಧ ಟೀಕೆ ಬರುವುದು ಸಾಮಾನ್ಯ. ನಂತರದ ದಿನದಲ್ಲಿ ನಮ್ಮಗಳ ಭಾವನೆಗಳು ಅಭಿವೃದ್ಧಿ ಕಡೆಗೆ ಇರಬೇಕು ಅನ್ನೋದು ನನ್ನ ಭಾವನೆ ಎಂದು ಅಭಿಪ್ರಾಯಪಟ್ಟರು.
Advertisement
ನನ್ನ 20 ತಿಂಗಳ ಆಡಳಿತವನ್ನು ಜನತೆ ಇನ್ನೂ ಮರೆತಿಲ್ಲ. ಅದರಿಂದಲೇ ನಾನು ಮತ್ತು ನನ್ನ ಪಕ್ಷ ಉಳಿದಿದೆ. ರಾಜ್ಯದ ಒಳಿತಿಗಾಗಿ ಮಾತ್ರ ಮೈತ್ರಿಗೆ ಒಪ್ಪಿಗೆ ಕೊಟ್ಟಿದ್ದೇನೆ ಹೊರತು ವೈಯಕ್ತಿಕ ಆಸೆ ಅಕಾಂಕ್ಷೆಗಾಗಿ ಅಲ್ಲ. ಹೊಗಳಿಕೆ ತೆಗಳಿಕೆ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.
Advertisement
ಇದೇ ವೇಳೆ ಸಿಎಂ ಕುಮಾರಸ್ವಾಮಿಯವರು ಜನರತ್ತ ಕೈ ಬೀಸಿ ಹಿಂತಿರುಗುವಾಗ ಭದ್ರತಾ ಲೋಪವಾಗಿತ್ತು. ಪೊಲೀಸರ ಬೆಂಗಾವಲಿನ ನಡುವೆಯೂ ಅಭಿಮಾನಿಯೋರ್ವ ಮುಂದೆ ನುಗ್ಗಿ ಸಿಎಂ ಕಾಲಿಗೆ ಬಿದ್ದಿದ್ದಾನೆ. ಅಭಿಮಾನಿಗೆ ಮತ್ತೆ ಸಿಗುತ್ತೇನೆ ಎಂದು ಎಚ್‍ಡಿಕೆ ಆಶ್ವಾಸನೆ ನೀಡಿದರು. ಅಭಿಮಾನಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
Advertisement
ಚುನಾವಣಾ ಪ್ರಚಾರ ಭಾಷಣದ ಸಮಯದಲ್ಲಿ ಸಿದ್ದರಾಮಯ್ಯನವರು, ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಬೆಂಬಲ ಪಡೆದು ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟ ಏರಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಮಾತು ಚರ್ಚೆಯಾಗುತ್ತಿದೆ.
Advertisement