ಕೊಪ್ಪಳ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಶಾಲೆಯೊಂದು ಸಂಪೂರ್ಣ ಜಲಾವೃತವಾಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನಡೆದಿದೆ.
ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಚಿಕ್ಕಮ್ಯಾಗೇರಿ ಗ್ರಾಮದ ನೀಲಮ್ಮ ಶಿವಶಂಕರ್ ದೇಸಾಯಿ ಪ್ರೌಢಶಾಲೆಯು ಸಂಪೂರ್ಣ ಜಲಾವೃತಗೊಂಡಿದೆ. ಶಾಲಾ ಆವರಣವು ಸುಮಾರು 6 ಎಕರೆ ವಿಸ್ತೀರ್ಣ ಹೊಂದಿದ್ದು, ಜಲಾವೃತದಿಂದಾಗಿ ಶಾಲಾ ಆವರಣವು ಕೆರೆಯಂತಾಗಿದೆ.
ಪ್ರೌಢಶಾಲೆಯಲ್ಲಿ ಸುಮಾರು 270 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ಮುಂಜಾನೆ ಶಾಲೆಗೆ ತೆರಳಲು ಮಕ್ಕಳು ಪರದಾಡುವ ಸ್ಥಿತಿ ಎದುರಾಗಿದೆ. ಮಳೆಯಿಂದಾಗಿ ಕೆಲ ಶಿಕ್ಷಕರು ರಾತ್ರಿಯಿಡೀ ಜಾಗರಣೆ ನಡೆಸಿದ್ದಾರೆ. ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಶಾಲಾ ಆವರಣದಲ್ಲಿ ನಿಂತಿರೋ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ಪ್ರತಿ ವರ್ಷ ಸುರಿಯುವ ಮಳೆಗೆ ಶಾಲೆ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಶಾಲೆಯ ಮುಂಭಾಗದಲ್ಲಿರುವ ಕಾಲುವೆಯ ಮೂಲಕ ಶಾಲಾ ಆವರಣಕ್ಕೆ ನೀರು ನುಗ್ಗುತ್ತದೆ. ಈ ನೀರನ್ನು ಹೊರಹಾಕುವುದೇ ಹರಸಾಹಸದ ಕೆಲಸ ಎಂದು ಹೇಳಿದ್ದಾರೆ.
ಕಾಲುವೆಗೆ ಅಡ್ಡಲಾಗಿ ಎತ್ತರವಾದ ಸೇತುವೆಯನ್ನು ನಿರ್ಮಿಸಿಕೊಡುವಂತೆ ಗ್ರಾಮಸ್ಥರು, ಶಾಲಾ ಶಿಕ್ಷಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರತಿ ವರ್ಷ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿಯವರು ಮೇಲಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
https://www.youtube.com/watch?v=–1HkQ4c23c