ಮಡಿಕೇರಿ: ತನ್ನ ನೈಜ ಪ್ರಕೃತಿ ಸೌಂದರ್ಯದಿಂದ ಲಕ್ಷಾಂತರ ಮಂದಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಕೊಡಗಿನಲ್ಲಿ ಈಗ ಪ್ರವಾಸಿಗರ ಅಬ್ಬರ ಜೋರಾಗಿದೆ. ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್ ಆಗಿದ್ದು, ಪ್ರವಾಸಿಗರು ಬೋಟ್ ಮೇಲೇರಿ ದುಬಾರೆ ಕ್ಯಾಂಪ್ ಕಡೆ ತೆರಳಿ ಆನೆಗಳ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ವೀಕೆಂಡ್ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ದೇಶದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಪ್ರವಾಸಿಗಳು ಕೊಡಗಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ದುಬಾರೆ ಸಾಕಾನೆ ಶಿಬಿರವಂತೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ತಾಣಕ್ಕೆ ಬರುವ ಪ್ರವಾಸಿಗರು ಒಂದಷ್ಟು ಕಾಲ ಆನೆಗಳ ಜೊತೆ ಕಳೆಯಲೇ ಬೇಕು.
ನದಿ ನೀರು ಹೆಚ್ಚಾಗಿದ್ದ ಪರಿಣಾಮ ದುಬಾರೆಗೆ ನಿಷೇಧ ಹೇರಲಾಗಿತ್ತು. ಯಾಕೆಂದರೆ ಒಂದು ತೀರದಿಂದ ಇನ್ನೊಂದು ತೀರದಲ್ಲಿರುವ ಸಾಕಾನೆ ಶಿಬಿರಕ್ಕೆ ಹೋಗಬೇಕು ಎಂದರೆ ಸುಮಾರು 300 ಮೀ. ಕಾವೇರಿ ನದಿಯಲ್ಲಿ ಬೋಟಿಂಗ್ ಮಾಡಿಕೊಂಡು ಹೋಗಬೇಕು. ಕಾವೇರಿ ನದಿಯ ನೀರು ಮುಂಗಾರು ಮಳೆಗೆ ಹೆಚ್ಚಾಗಿದ್ದ ಪರಿಣಾಮ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವೇಶ ಇರಲಿಲ್ಲ. ಜೊತೆಗೆ ಬೋಟ್ ವ್ಯವಸ್ಥೆ ಕೂಡ ಇಲ್ಲದೆ ಪ್ರವಾಸಿಗರು ಆನೆ ಶಿಬಿರದ ಕಡೆ ತೆರಳಲಾಗದೆ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಬಿತ್ತರಿಸಿತ್ತು. ಇದೀಗ ವರದಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಮೂರು ಬೋಟ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದೆ. ಬೋಟ್ ಮೂಲಕ ಸಾಗುವ ಪ್ರವಾಸಿಗರು ಸಾಕಾನೆ ಶಿಬಿರ ತಲುಪಿ ಸಾಕಾನೆಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.