BMW ಡಿಕ್ಕಿ ಹೊಡೆದು ಮಹಿಳೆ ಸಾವು – ಸಿಎಂ ಏಕನಾಥ್‌ ಶಿಂಧೆ ಬಣದ ನಾಯಕನ ಪುತ್ರ ಆರೋಪಿ

Public TV
2 Min Read
mumbai BMW accident women died

– ಶಿವಸೇನೆ ನಾಯಕನ ಪುತ್ರ ಕುಡಿದು ಕಾರು ಚಲಾಯಿಸಿದ ಆರೋಪ

ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ (Eknath Sindhe) ಬಣದ ಹಿರಿಯ ನಾಯಕರೊಬ್ಬರ ಪುತ್ರ ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ಮುಂಬೈನಲ್ಲಿ (Mumbai Accident) ನಡೆದಿದೆ.

ಮುಂಬೈನ ವರ್ಲಿಯಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿದೆ. ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು (BMW Car), ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತ ಮಾಡಿದ ಕಾರನ್ನು ಶಿವಸೇನೆಯ ಹಿರಿಯ ನಾಯಕನ 24 ವಯಸ್ಸಿನ ಮಗ ಚಲಾಯಿಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪರಾರಿಯಾಗಿರುವ ಯುವಕ ಮಿಹಿರ್‌ ಶಾ, ಕಾರು ಅಪಘಾತದ ವೇಳೆ ಪಾನಮತ್ತನಾಗಿದ್ದ ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಭಾರೀ ಮಳೆಗೆ ಗುಜರಾತ್‍ನಲ್ಲಿ ಕುಸಿದು ಬಿದ್ದ ಕಟ್ಟಡ – 7 ಮಂದಿ ದುರ್ಮರಣ

EKNATH SHINDE

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಶಿವಸೇನೆಯ ಉಪನಾಯಕ ರಾಜೇಶ್ ಶಾ ಅವರಿಗೆ ಈ ಕಾರು ಸೇರಿದೆ. ರಾಜಕಾರಣಿ ಮತ್ತು ಆತನ ಚಾಲಕ ಇದೀಗ ಪೊಲೀಸ್ ವಶದಲ್ಲಿದ್ದು, ಪ್ರಕರಣ ದಾಖಲಿಸಲಾಗಿದೆ. ಅಪಘಾತದ ಸಮಯದಲ್ಲಿ, ಸೇನಾ ನಾಯಕನ ಮಗ ಮತ್ತು ಅವರ ಚಾಲಕ ಐಷಾರಾಮಿ ಕಾರಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಿಹಿರ್ ಶಾ ಫೋನ್ ಸ್ವಿಚ್ ಆಫ್ ಮಾಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮಿಹಿರ್ ಶಾ ನಿನ್ನೆ ರಾತ್ರಿ ಜುಹುವಿನ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾನೆ. ಮನೆಗೆ ಹೋಗುವಾಗ ತನ್ನನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗುವಂತೆ ಚಾಲಕನನ್ನು ಕೇಳಿದ್ದಾನೆ. ಕಾರು ವರ್ಲಿಗೆ ಬಂದಾಗ, ಮಿಹಿರ್ ತಾನು ಕಾರನ್ನು ಓಡಿಸುತ್ತೇನೆ ಎಂದು ಒತ್ತಾಯಿಸಿ ಪಡೆದುಕೊಂಡಿದ್ದಾನೆ. ಪಾನಮತ್ತನಾಗಿದ್ದ ಮಿಹಿರ್‌ ಕಾರು ಚಲಾಯಿಸುವ ವೇಳೆ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ನಾಲ್ವರು ಉಗ್ರರು ಬಲಿ – ಇಬ್ಬರು ಯೋಧರು ಹುತಾತ್ಮ

ಸ್ಕೂಟರ್‌ನಲ್ಲಿ ವರ್ಲಿಯ ಕೋಳಿವಾಡ ಪ್ರದೇಶದ ನಿವಾಸಿಗಳಾದ ಕಾವೇರಿ ನಕ್ವಾ ಮತ್ತು ಆಕೆಯ ಪತಿ ಪ್ರದಿಕ್ ನಕ್ವಾ ಇದ್ದರು. ಮೀನು ಮಾರಿ ಜೀವನ ಸಾಗಿಸುತ್ತಿದ್ದ ದಂಪತಿ, ಮೀನು ತರಲು ಪ್ರತಿದಿನ ಸಸೂನ್ ಡಾಕ್‌ಗೆ ಹೋಗುತ್ತಿದ್ದರು. ಅವರು ಹಿಂತಿರುಗುತ್ತಿದ್ದಾಗ BMW ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರು ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಕಾವೇರಿ ನಕ್ವಾ ಮೇಲೆ ಹರಿದಿದೆ. ಕಾರು ಸ್ಥಳದಿಂದ ಪರಾರಿಯಾಗಿದ್ದು, ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಪತಿ ಪ್ರದಿಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪೊಲೀಸರ ತನಿಖೆಯಲ್ಲಿ ಸಾಕ್ಷ್ಯ ನಾಶಪಡಿಸುವ ಪ್ರಯತ್ನವೂ ಬೆಳಕಿಗೆ ಬಂದಿದೆ. ಕಾರಿನ ವಿಂಡ್ ಶೀಲ್ಡ್ ಶಿವಸೇನೆಯ ಸ್ಟಿಕ್ಕರ್ ಅನ್ನು ಹೊಂದಿದ್ದು, ಅದನ್ನು ಗೀಚಲಾಗಿದೆ. ಸೇನಾ ನಾಯಕನೊಂದಿಗಿನ ವಾಹನದ ಸಂಪರ್ಕವನ್ನು ಮರೆಮಾಚಲು ಯತ್ನಿಸಲಾಗಿದೆ. ಅಪಘಾತದ ನಂತರ ಕಾರಿನ ನಂಬರ್ ಪ್ಲೇಟ್‌ಗಳಲ್ಲಿ ಒಂದನ್ನು ತೆಗೆದುಹಾಕಲಾಯಿತು. ಆದರೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕ್ರಮಕೈಗೊಂಡಿದ್ದಾರೆ.

ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಸಿಎಂ ಏಕನಾಥ್‌ ಶಿಂಥೆ, ಇದು ದುರಾದೃಷ್ಟಕರ. ಕಾನೂನಿನ ಮುಂದೆ ಎಲ್ಲರೂ ಸಮಾನರು, ನಾನು ಪೊಲೀಸರ ಜೊತೆ ಮಾತನಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ಯೋಜನೆಗೆ ಗೋವಾ ಮತ್ತೆ ಕ್ಯಾತೆ – ಕೇಂದ್ರದಿಂದ ‘ಪ್ರವಾಹ್’ ತಂಡ ರಚನೆ

Share This Article