– ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಅನಾಮಧೇಯರಿಂದ ಮಾಹಿತಿ
ಭೋಪಾಲ್: ತಂದೆಯೇ ತನ್ನ 8 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ನೀಮಚ್ ನಗರದಲ್ಲಿ ನಡೆದಿದೆ.
ಅನಾಮಧೇಯರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ದೂರು ನೀಡಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಸಂಜೆ ಹೊತ್ತಿಗೆ ಅನಾಮಧೇಯರೊಬ್ಬರು ಕರೆ ಮಾಡಿ, ಕಂಠಪೂರ್ತಿ ಕುಡಿದು ಬರುತ್ತಿದ್ದ ಆರೋಪಿ ಪ್ರತಿನಿತ್ಯ ಮಗಳನ್ನು ಮನಬಂದಂತೆ ಥಳಿಸುತ್ತಿದ್ದ ಎಂದು ತಿಳಿಸಿದರು. ನಂತರ ಸಂತ್ರಸ್ತೆಯನ್ನು ಪತ್ತೆ ಹಚ್ಚಲು ಮುಂದಾದೆವು, ಎರಡು ದಿನಗಳ ನಂತರ ಅವರ ನಿವಾಸದಲ್ಲಿ ಬಾಲಕಿಯನ್ನು ಹುಡುಕಲು ಸಾಧ್ಯವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಮೀಹನ್ ಶುಕ್ಲಾ ಮಾಹಿತಿ ನಿಡಿದರು.
ಬಾಲಕಿ ಮಕ್ಕಳ ತಜ್ಞರಿಗೆ ತಾನು ಎದುರಿಸಿದ ಕಷ್ಟಗಳನ್ನು ಕುರಿತು ವಿವರಿಸಿದ್ದಾಳೆ. ನಂತರ ಘಟನೆ ಕುರಿತು ಪೊಲೀಸರಿಗೆ ಎಲ್ಲವನ್ನೂ ಹೇಳಿದ್ದಾಳೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಅತ್ಯಾಚಾರಕ್ಕೊಳಗಾಗಿರುವುದು ದೃಢಪಟ್ಟಿದೆ.
ಆರೋಪಿಯು ವೃತ್ತಿಯಲ್ಲಿ ಕಾರ್ಮಿಕನಾಗಿದ್ದು, ಪೊಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.