ದಾವಣಗೆರೆ: ಕುಡುಕನೊಬ್ಬ ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಹದಡಿ ರೋಡ್ ಬಳಿ ನಡೆದಿದೆ.
ಕಂಠಪೂರ್ತಿ ಕುಡಿದಿದ್ದ ರುದ್ರೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಬೈಕನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಇದಕ್ಕೆ ಸಿಟ್ಟಾದ ರುದ್ರೇಶ್ ಎಎಸ್‍ಐ ಅಂಜಿನಪ್ಪ, ಪೇದೆ ಸಿದ್ದೇಶ್, ಹಾಗೂ ಮುಖ್ಯ ಪೇದೆ ನಾರಾಯಣರಾಜ್ ಅರಸು ಮೇಲೆ ಹಲ್ಲೆ ನಡೆಸಿದ್ದಾನೆ.
ಬೆಳಗ್ಗಿನ ಸಮಯದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ಏಕೆ ನಡೆಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ ರುದ್ರೇಶ್‍ಗೆ ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದ ವೇಳೆ ಏಕಾಏಕಿ ಪೊಲೀಸರ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ರಸ್ತೆ ಬದಿ ವ್ಯಾಪಾರ ನಡೆಸಿದ್ದ ತರಕಾರಿ ಹಾಗೂ ಗೊಂಬೆಗಳನ್ನು ಎತ್ತಿ ಪೊಲೀಸ್ ಪೇದೆಗಳ ಮೇಲೆ ದಾಳಿ ನಡೆಸಿದ್ದಾನೆ. ಮುಖ್ಯ ಪೇದೆ ಅರಸು ಅವರ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು ಈಗ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿದ ರುದ್ರೇಶ್ ವಕೀಲ ವೃತ್ತಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸದ್ಯ ಕೆಟಿಜೆ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಪೊಲೀಸ್ ಪದೆಗಳು ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡವಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=MyojsAvB18c