ಬೆಂಗಳೂರು: ಮದ್ಯ ಖರೀದಿ ಮಾಡಿದ ಕುಡುಕರು ಹಣವನ್ನು ಗೂಗಲ್ ಪೇ ಮೂಲಕ ಪಾವತಿ ಮಾಡಲು ಹೋಗಿದ್ದಾರೆ. ಆದರೆ ಔಟ್‍ಲೇಟ್‍ನಲ್ಲಿದ್ದ ಕ್ಯಾಶಿಯರ್ ನಮ್ಮ ಬಳಿ ಗೂಗಲ್ ಪೇ ಇಲ್ಲ ಎಂದಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹುಳಿಮಾವುವಿನಲ್ಲಿ ನಡೆದಿದೆ.
ಭರತ್ ಮತ್ತು ಆತನ ಗ್ಯಾಂಗ್ ಭಾನುವಾರ ಬಿಳೇಕಳ್ಳಿಯ ಬಳಿ ಇರುವ ಎಸ್‍ಎಲ್‍ಆರ್ ಔಟ್‍ಲೇಟ್ ಅಲ್ಲಿ ಮದ್ಯವನ್ನು ಖರೀದಿ ಮಾಡಿದ್ದರು. ಖರೀದಿ ಮಾಡಿದ ಬಳಿಕ ಗೂಗಲ್ ಪೇನಲ್ಲಿ ಹಣ ಪಾವತಿ ಮಾಡಲು ಮುಂದಾಗಿದ್ದಾರೆ. ಆದರೆ ಕ್ಯಾಶಿಯರ್ ನಮ್ಮ ಬಳಿ ಗೂಗಲ್ ಪೇ ಇಲ್ಲ ನಗದು ಹಣವನ್ನು ಪಾವತಿ ಮಾಡಿ ಎಂದು ಸೂಚಿಸಿದ್ದಾನೆ. ಈ ವೇಳೆ ನಮ್ಮ ಬಳಿ ಗೂಗಲ್ ಪೇ ಮಾತ್ರ ಇದೆ. ಬೇಕಾದರೆ ಹಣವನ್ನು ಪಡೆ ಇಲ್ಲವೇ ಬಿಡು ಎಂದು ಭರತ್ ಹಾಗೂ ಆತನ ಗ್ಯಾಂಗ್ ಗಲಾಟೆ ಮಾಡಿದ್ದಾರೆ.
ಹೀಗೆ ಗಲಾಟೆ ಮಾಡಿಕೊಂಡು ಭರತ್ ಹಾಗೂ ಆತನ ಗ್ಯಾಂಗ್ ಮದ್ಯದಂಗಡಿಯಿಂದ ಹೋಗಿದ್ದರು. ಆದರೆ ಬಳಿಕ ಕುಡಿದು ಬಂದ ಈ ಗ್ಯಾಂಗ್ ಏಕಾಏಕಿ ಕ್ಯಾಶಿಯರ್‍ನ ಬಳಿ ಹೋಗಿ ಆತನಿಗೆ ಚಾಕುವಿನಿಂದ ಇರಿದಿದ್ದಾರೆ. ಅಷ್ಟೇ ಅಲ್ಲದೇ ಔಟ್‍ಲೇಟ್‍ನಲ್ಲಿ ಇದ್ದ ಮದ್ಯದ ಬಾಟಲ್‍ಗಳನ್ನೆಲ್ಲಾ ಒಡೆದು ಹಾಕಿದ್ದಾರೆ.
ಸದ್ಯ ಮದ್ಯದಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಈ ಹಲ್ಲೆಯ ದೃಶ್ಯ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಗ್ಯಾಂಗ್ ಲೀಡರ್ ಭರತ್‍ನನ್ನು ಬಂಧಿಸಿದ್ದಾರೆ. ಅಲ್ಲದೆ ಆತನ ಜೊತೆಗಿದ್ದ ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.