Monday, 16th July 2018

Recent News

11 ತಿಂಗಳ ಮಗನನ್ನು ಮಾರಿ ಮೊಬೈಲ್ ಫೋನ್, ಸೀರೆ, ಬೆಳ್ಳಿ ಕಾಲ್ಗೆಜ್ಜೆ ಖರೀದಿಸಿದ!

 

ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗುವನ್ನ 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದರಿಂದ ಬಂದ ಹಣದಲ್ಲಿ ಆತ ಮೊಬೈಲ್ ಫೋನ್, ಬೆಳ್ಳಿ ಕಾಲ್ಗೆಜ್ಜೆ, ಸೀರೆ ಹಾಗೂ ಮದ್ಯವನ್ನ ಖರೀದಿಸಿದ್ದಾನೆ.

ಮಗುವನ್ನು ಮಾರಾಟ ಮಾಡಿದ ತಂದೆ ಬಲರಾಮ್ ಮುಖಿಯನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಬಲರಾಮ್ ತನ್ನ 11 ತಿಂಗಳ ಮಗನನ್ನು 25 ಸಾವಿರ ರೂ.ಗೆ ಮಾರಾಟ ಮಾಡಿದ್ದಾನೆ. 25 ಸಾವಿರ ರೂಪಾಯಿಯಲ್ಲಿ 2 ಸಾವಿರ ರೂ.ಗೆ ಒಂದು ಮೊಬೈಲ್ ಫೋನ್ ಖರೀದಿಸಿದ್ದಾನೆ. ಜೊತೆಗೆ ತನ್ನ 7 ತಿಂಗಳ ಮತ್ತೊಬ್ಬ ಮಗಳಿಗಾಗಿ 1500 ರೂ.ನ ಬೆಳ್ಳಿ ಕಾಲ್ಗೆಜ್ಜೆ, ಹೆಂಡತಿ ಸುಕುತಿಗಾಗಿ ಒಂದು ಸೀರೆ ಹಾಗೂ ಉಳಿದ ಹಣದಲ್ಲಿ ಮದ್ಯವನ್ನ ಖರೀದಿಸಿದ್ದಾನೆ.

ಪೊಲೀಸರು ಬಲರಾಮ್ ಹಾಗೂ ಆತನ ಪತ್ನಿ ಸುಕುತಿ ಇಬ್ಬರನ್ನೂ ವಿಚಾರಣೆ ಮಾಡಿದ್ದಾರೆ. ಬಲರಾಮ್ ದಂಪತಿಗೆ 10 ವರ್ಷದ ಮತ್ತೊಬ್ಬ ಮಗನಿದ್ದಾನೆ. ಬಲರಾಮ್‍ಗೆ ಯಾವುದೇ ಆದಾಯವಿರಲಿಲ್ಲ. ಆತ ಸ್ವೀಪರ್ ಕೆಲಸ ಮಾಡಿಕೊಂಡಿದ್ದು ಮದ್ಯಪಾನದ ಚಟವಿತ್ತು ಎಂದು ಭದ್ರಕ್‍ನ ಎಸ್‍ಎಸ್‍ಪಿ ಅನೂಪ್ ಸಾಹೋ ಹೇಳಿದ್ದಾರೆ.

ಪೊಲೀಸರು ಹೇಳುವ ಪ್ರಕಾರ ಬಲರಾಮ್‍ನ ಸಂಬಂಧಿಯಾದ ಬಲಿಯಾ ಅಂಗನವಾಡಿ ನೌಕರನಾಗಿದ್ದು ಮಗುವಿನ ಮಾರಾಟದಲ್ಲಿ ಭಾಗಿಯಾಗಿದ್ದಾನೆ. 60 ವರ್ಷದ ದಂಪತಿಯನ್ನು ಭೇಟಿ ಮಾಡಿದಾಗ ಬಲರಾಮ್, ಸುಕುತಿ ಹಾಗೂ ಬಲಿಯಾಗೆ ಹಣ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ. ಸೋಮನಾಥ್ ಸೇತಿ ನಿವೃತ್ತ ಸರ್ಕಾರಿ ನೌಕರರಾಗಿದ್ದು, ದಂಪತಿ 2012ರಲ್ಲಿ ತಮ್ಮ 24 ವರ್ಷದ ಮಗನನ್ನು ಕಳೆದುಕೊಂಡಿದ್ದರು. ಸೋಮನಾಥ್ ಅವರ ಪತ್ನಿ ಖಿನ್ನತೆಗೊಳಗಾಗಿದ್ದರಿಂದ ಒಂದು ಗಂಡು ಮಗುವನ್ನು ದತ್ತು ತೆಗೆದುಕೊಳ್ಳಲು ಹುಡುಕುತ್ತಿದ್ದರು. ಬಲಿಯಾಗೆ ಸೇತಿ ದಂಪತಿ ಗೊತ್ತಿದ್ದರಿಂದ ಆತ ಬಲರಾಮ್‍ಗೆ ಇವರ ಪರಿಚಯ ಮಾಡಿಸಿ ಮಗುವಿನ ಮಾರಾಟಕ್ಕೆ ಡೀಲ್ ಮಾಡಿಕೊಂಡಿದ್ರು.

ನನ್ನ ಪತಿ ಕುಡಿದ ಮತ್ತಿನಲ್ಲಿದ್ರು. ಇದೊಂದು ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗು. ಇದನ್ನು ಇಟ್ಟುಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಯಾರಿಗಾದ್ರೂ ಕೊಡಬೇಕೆಂದಿದ್ದೇನೆ ಎಂದು ದಂಪತಿಗೆ ಹೇಳಿದ್ರು ಎಂದು ಬಲರಾಮ್ ಪತ್ನಿ ಹೇಳಿದ್ದಾಳೆ. ನಾನು ಮಗುವಿನ ಮಾರಾಟವನ್ನು ವಿರೋಧಿಸಿದೆ. ಈಗಾಗಲೇ ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತಿದ್ದು ಈ ಮಗುವನ್ನೂ ನೋಡಿಕೊಳ್ಳುತ್ತೇನೆ ಎಂದು ಹೇಳಿದೆ. ಆದ್ರೆ ಅವರು ನನಗೆ ಹೊಡೆದು ಬಲವಂತವಾಗಿ ಮಗುವನ್ನು 25 ಸಾವಿರ ರೂಪಾಯಿಗೆ ಮಾರಾಟ ಮಾಡಿ ಮೊಬೈಲ್ ಫೋನ್, ಸೀರೆ ಮತ್ತು ಬೆಳ್ಳಿ ಕಾಲ್ಗೆಜ್ಜೆ ತಂದರು ಎಂದು ಹೇಳಿದ್ದಾಳೆ.

ಆದ್ರೆ ಆರೋಪಿ ತಂದೆ ಹೇಳೋದೇ ಬೇರೆ. ನಾನು ಮತ್ತು ಆಕೆ ಇಬ್ಬರೂ ಕುಡಿದಿದ್ದೆವು. ಇಬ್ಬರ ಮಧ್ಯೆ ಜಗಳವಾಗಿ ಒಬ್ಬರಿಗೊಬ್ಬರು ಹೊಡೆದೆವು. ನಂತರ ಜಗಳದ ಮಧ್ಯೆ ನಾನು ಮಗುವನ್ನ ಎತ್ತಿಕೊಂಡು ಹೋಗಿ ಮಾರಿಬಿಟ್ಟೆ ಎಂದು ಹೇಳಿದ್ದಾನೆ.

 

Leave a Reply

Your email address will not be published. Required fields are marked *