ಮುಂಬೈ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 52 ವರ್ಷದ ವ್ಯಕ್ತಿಯೊಬ್ಬ ಚಾಕುವಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ್ದು, ಮಧ್ಯಪ್ರವೇಶಿಸಿದ ಮಗಳನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಮನೀಷಾ(45) ಮೃತ ಮಹಿಳೆ. 24 ವರ್ಷದ ಮಗಳು ಗೌರಿ ಸದ್ಯಕ್ಕೆ ನಗರದ ಕಲ್ಯಾಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಗೌರಿಯ ಮದುವೆ ಮುಂದಿನ ತಿಂಗಳು 8 ರಂದು ನಿಗದಿಯಾಗಿದೆ. ಮದುವೆ ತಯಾರಿಯಲ್ಲಿದ್ದ ಕುಟುಂಬ ಈ ಘಟನೆಯಿಂದ ಆಘಾತಕ್ಕೊಳಗಾಗಿದೆ.
Advertisement
Advertisement
ಏನಿದು ಪ್ರಕರಣ?
ಈ ಘಟನೆ ಕಲಾ ತಲಾವ್ ಬಳಿಯ ಥಂಕರ್ ಪಾಡಾ ಪ್ರದೇಶದಲ್ಲಿ ನಡೆದಿದೆ. ಕಳೆದ ಎರಡು ವರ್ಷಗಳಿಂದ ಆರೋಪಿ ಪತಿ ಮೋಹನ್ ಗುರುನಾಥ್ ಮಹಾಜನ್ ಆತನ ಪತ್ನಿ ಮನೀಷಾ ಜೊತೆ ವಾಸಿಸುತ್ತಿರಲಿಲ್ಲ. ಆದರೆ ಗುರುವಾರ ರಾತ್ರಿ ಆರೋಪಿ ಮೋಹನ್ ಮಗಳ ವಿವಾಹದ ಬಗ್ಗೆ ಪತ್ನಿ ಮನೀಷಾ ಜೊತೆ ಮಾತನಾಡಲು ಬಂದಿದ್ದನು. ಈ ವೇಳೆ ಇಬ್ಬರ ನಡುವೆ ವಾದ ನಡೆದಿದ್ದು, ಕೋಪದಲ್ಲಿ ಮೋಹನ್ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಬಜಾರ್ಪೇತ್ ಪೊಲೀಸ್ ಹೇಳಿದ್ದಾರೆ.
Advertisement
ತಂದೆ-ತಾಯಿ ಮಧ್ಯೆ ಜಗಳ ನಡೆಯುತ್ತಿದ್ದಾಗ ಮಗಳು ಗೌರಿ ಮಧ್ಯಪ್ರವೇಶಿಸಿದ್ದಾಳೆ. ಆಗ ಆರೋಪಿ ತಂದೆ ಆಕೆಯ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಗೌರಿ ಸಹಾಯಕ್ಕಾಗಿ ಗೆಳತಿಯನ್ನ ಕೂಗಿದ್ದಾಳೆ. ಗೌರಿಯ ಕಿರುಚಾಟವನ್ನು ಕೇಳಿ ತಕ್ಷಣ ಬಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಗಾಯಗೊಂಡಿದ್ದ ಗೌರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ತಂದೆ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement
ಈ ಕುರಿತು ನಾವು ಕೊಲೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಗೌರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಕೆಯ ಹೇಳಿಕೆಯನ್ನು ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಕೊಲೆಗೆ ಸರಿಯಾದ ಕಾರಣ ಇನ್ನೂ ಖಚಿತವಾಗಿಲ್ಲ. ಆರೋಪಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಬಲೆ ಬೀಸಿದ್ದೇವೆ. ಸದ್ಯಕ್ಕೆ ವೈದ್ಯರು ಅನುಮತಿ ನೀಡಿದಾಗ ಗೌರಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಯಶ್ವಂತ್ ಚವಾಣ್ ತಿಳಿಸಿದ್ದಾರೆ.