ಬೆಂಗಳೂರು: ಗಾಂಜಾ, ಮದ್ಯ ಹೀಗೆ ದುಷ್ಚಟಗಳಿಗೆ ದಾಸನಾಗಿರುವ ವ್ಯಕ್ತಿಯೋರ್ವ ರಸ್ತೆ ಮಧ್ಯೆ ಮಲಗಿ, ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಹಣ ನೀಡುವಂತೆ ಕಾಟ ಕೊಟ್ಟ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.
ನೆಲಮಂಗಲ ಪಟ್ಟಣದ ಕೆಇಬಿ ಆಂಜನೇಯ ದೇವಾಲಯದ ರಸ್ತೆಯಲ್ಲಿ ಕುಡುಕ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾನೆ. ರಸ್ತೆಯಲ್ಲಿ ಬರುವ ಕಾರು, ಬೈಕ್‍ಗಳಿಗೆ ಅಡ್ಡ ಮಲಗಿ ಹಣಕ್ಕೆ ಬೇಡಿಕೆ ಇಟ್ಟು ತೊಂದರೆ ಕೊಡುತ್ತಾ, 100 ರೂ. ಕೊಡುವವರೆಗೂ ಬಿಡದೇ ರಂಪಾಟ ಮಾಡಿ ಹಣ ತೆಗೆದುಕೊಳ್ಳುತ್ತಾನೆ. ಒಂದು ವೇಳೆ ಆತ ಕೇಳಿದಾಗ ಹಣ ನೀಡದಿದ್ದರೆ ಬೀದಿ ರಂಪಾಟ ಮಾಡಿ ಗಲಾಟೆ ಮಾಡುತ್ತಾನೆ. ಹೀಗಾಗಿ ಈತನ ಕಾಟ ತಾಳಲಾರದೆ ಜನರು ಹಣ ಕೊಟ್ಟು ದಯವಿಟ್ಟು ಕಾಟ ಕೊಡಬೇಡಪ್ಪ ಎಂದು ಜಾಗ ಖಾಲಿ ಮಾಡುತ್ತಾರೆ.
ಪ್ರತಿನಿತ್ಯ ಈ ವ್ಯಕ್ತಿಯದ್ದು ಇದೇ ಗೋಳಾಗಿ ಬಿಟ್ಟಿದೆ. ಈತನ ಪುಂಡಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಗಾಂಜಾ ಇನ್ನಿತರ ಮಾದಕವಸ್ತುಗೆ ಯುವಕರು ಮಾರು ಹೋಗಿದ್ದು, ನಶೆಯಲ್ಲಿ ಈ ರೀತಿ ಬೀದಿ ರಂಪಾಟ ಮಾಡಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾರೆ.