ನವದೆಹಲಿ: ಹಸಿವಿನಿಂದ ಅಳುತ್ತಿದ್ದ 3 ವರ್ಷದ ಪುಟ್ಟ ಮಗುವಿಗೆ ಆಕೆಯ ತಂದೆ ಹಾಲಿನ ಬಾಟಲಿಯಲ್ಲಿ ಮದ್ಯ ಹಾಕಿ ಒತ್ತಾಯಪೂರ್ವಕವಾಗಿ ಕುಡಿಸುತ್ತಿದ್ದ ಹೀನಾಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ನಡೆದಿದ್ದು, ಪುಟ್ಟ ಕಂದಮ್ಮಳನ್ನು ದೆಹಲಿಯ ಮಹಿಳಾ ಆಯೋಗದ ತಂಡ ರಕ್ಷಣೆ ಮಾಡಿದೆ. ವಿಸರ್ಜನೆಯಾದ ಮಲ-ಮೂತ್ರದಲ್ಲಿಯೇ ಮಲಗಿ ಹೊರಳಾಡುತ್ತಿದ್ದ 3 ವರ್ಷದ ಪುಟ್ಟ ಕಂದಮ್ಮ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಈಕೆಯ ಪಕ್ಕದಲ್ಲೇ ಕುಡಿದ ಮತ್ತಿನಲ್ಲಿ ತಂದೆಯೂ ಮಲಗಿದ್ದರುವುದು ಮಹಿಳಾ ಆಯೋಗದ ತಂಡ ಭೇಟಿ ನೀಡಿದಾಗ ಕಂಡುಬಂದಿದೆ.
Advertisement
ಕಳೆದ ಮೂರು ದಿನಗಳಿಂದ ಪ್ರೇಮ ನಗರ ಪ್ರದೇಶದಲ್ಲಿ ಮಗು ಮಲ-ಮೂತ್ರ ಮಾಡಿಕೊಂಡು ಅದರ ಮೇಲೆಯೇ ಮಲಗುತ್ತಿದ್ದಳು. ಅಲ್ಲದೆ ತಂದೆ ಆಕೆಗೆ ಆನ್ನ-ಆಹಾರ ನೀಡುತ್ತಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೂಡಲೇ ಆಯೋಗದವರು ಸ್ಥಳಕ್ಕೆ ದೌಡಾಯಿಸಿದಾಗ ರೂಮಿನಲ್ಲಿ ಮದ್ಯದ ಖಾಲಿ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿತ್ತು. ಇದರ ಮಧ್ಯೆಯೇ ತಂದೆ ವಿಪರೀತ ಕುಡಿದು ಜಗತ್ತಿನ ಪರಿವೇ ಇಲ್ಲದಂತೆ ಮಲಗಿದ್ದನು. ಹೀಗಾಗಿ ಆತನನ್ನು ಎಬ್ಬಿಸಲು ಆಯೋಗದ ಸಿಬ್ಬಂದಿ ಪ್ರಯತ್ನಿಸಿದರು. ಆದ್ರೆ ಆತ ಸಿಬ್ಬಂದಿ ಮೇಲೆ ಎಗರಾಡಿದ್ದಾನೆ.
Advertisement
Advertisement
ಈ ವೇಳೆ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ತಂದೆ ಹಾಗೂ ಮಗಳನ್ನು ಪ್ರೇಮ್ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದ್ರೆ ಇದೂವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂಬುದಾಗಿ ವರದಿಯಾಗಿದೆ.
Advertisement
ಇತ್ತ ಸ್ಥಳೀಯರು ಮಗುವಿನ ತಂದೆ ಕೈ ಗಾಡಿ ಓಡಿಸುತ್ತಿದ್ದು, ವಿಪರೀತ ಮದ್ಯವ್ಯಸನಿಯಾಗಿದ್ದಾನೆ. ಹೀಗಾಗಿ ಆತನಿಗೆ ತನ್ನ ಮಗಳು ಎದ್ದು ಹಸಿನಿಂದ ಅಳುತ್ತಿದ್ದರೂ ಗೋಚರವೇ ಇರುವುದಿಲ್ಲ. ಅಲ್ಲದೆ ರೂಮ್ ಕೂಡ ಕೊಳಕಿನಿಂದ ಕೂಡಿದೆ. ಪುಟ್ಟ ಕಂದಮ್ಮ ವರ್ಷದ ಹಿಂದೆಯಷ್ಟೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆ ಬಳಿಕ ತಂದೆ ಕುಡಿತದ ದಾಸನಾಗಿದ್ದಾನೆ ಎಂದು ಆಯೋಗದ ತಂಡಕ್ಕೆ ದೂರಿದ್ದಾರೆ.
ಆತ ಕೋಣೆಯೊಳಗೆ ಪುಟ್ಟ ಕಂದಮ್ಮ ಒಬ್ಬಳನ್ನೇ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದನು. ಅಲ್ಲದೆ ನೆರೆಹೊರೆಯವರನ್ನು ಕೂಡ ತನ್ನ ಮನೆಗೆ ಹೋಗಲು ಬಿಡುತ್ತಿಲ್ಲ. ಅಲ್ಲದೆ ಮುಗ್ಧ ಕಂದಮ್ಮ ಹಸಿವಿನಿಂದ ಅಳುತ್ತಿದ್ದರೆ ಆತ ಹಾಲಿನ ಬಾಟಲಿಯಲ್ಲಿ ಮದ್ಯ ಹಾಕಿ ಒತ್ತಾಯಪೂರ್ವಕವಾಗಿ ಕುಡಿಸುತ್ತಿದ್ದನು ಎಂದು ದೂರಿದ್ದಾರೆ.
ಸದ್ಯ ಮಹಿಳಾ ಆಯೋಗದವರು ಮಗುವನ್ನು ಹೊಲಸು ಕೊಠಡಿಯಿಂದ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಖಾಸಗಿ ಅಂಗದಲ್ಲಿ ಸೋಂಕು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆ ಗುಣಮುಖಳಾದ ಬಳಿಕ ಆಕೆಯನ್ನು ಆಶ್ರಯ ಮನೆಗೆ ಕಳುಹಿಸಲಾಗುವುದು ಎಂದು ಮಹಿಳಾಯ ಆಯೋಗದ ಸಿಬ್ಬಂದಿ ತಿಳಿಸಿದ್ದಾರೆ.
ಈ ಎಲ್ಲಾ ಘಟನೆಯನ್ನು ಕಂಡು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ದಂಗಾಗಿದ್ದು, ಕಂದಮ್ಮನ ತಂದೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ದೆಹಲಿ ಪೊಲೀಸರಿಗೆ ಆಗ್ರಹಿಸಿದ್ದಾರೆ.