ನವದೆಹಲಿ: ಭಾರತದಾದ್ಯಂತ ಬಹುತೇಕ ಔಷಧಗಳ ಬೆಲೆ ಶೇ.80ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಜನರಿಕ್ ಔಷಧಗಳನ್ನು ಬಳಸುವ ಸಾರ್ವಜನಿಕರಿಗೆ ಲಾಭವಾಗಲಿದೆ.
ಸರ್ಕಾರದ ಬೆಲೆ ನಿಯಂತ್ರಣಕ್ಕೆ ಒಳಪಡದ (ನಾನ್ ಷೆಡ್ಯೂಲ್ಡ್) ಔಷಧಗಳ ಮಾರಾಟದಲ್ಲಿ ಲಾಭದ ಅಂಶಕ್ಕೆ (ಮಾರ್ಜಿನ್) ಗರಿಷ್ಠ ಶೇ. 30ರ ಮಿತಿ ವಿಧಿಸಿಕೊಳ್ಳುವಂತೆ ಔಷಧೋದ್ಯಮದ ಮುಂದೆ ಸರ್ಕಾರ ಪ್ರಸ್ತಾಪ ಇಟ್ಟಿತ್ತು. ಇದಕ್ಕೆ ಔಷಧೋದ್ಯಮದ ಸಮ್ಮತಿ ನೀಡಿದ್ದು ದರ ಇಳಿಕೆಯಾಗಲಿದೆ.
Advertisement
Advertisement
ಇತ್ತೀಚೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಮತ್ತು ಔಷಧೋದ್ಯಮದ ಪ್ರತಿನಿಧಿಗಳ ಸಭೆಯಲ್ಲಿ ಈ ಮಹತ್ವದ ನಿರ್ಣಯಕ್ಕೆ ಸಹಮತ ವ್ಯಕ್ತವಾಗಿದೆ. ಹೀಗಾಗಿ ದೇಶಾದ್ಯಂತ ಔಷಧಗಳ ಬೆಲೆ ಶೇ. 80ರಷ್ಟು ಇಳಿಕೆಯಾಗಲಿದೆ ಎನ್ನಲಾಗಿದೆ.
Advertisement
ಈ ಬಗ್ಗೆ ಭಾರತೀಯ ಔಷಧ ಉತ್ಪಾದಕರ ಸಂಘದ ಅಧ್ಯಕ್ಷ ದೀಪ್‍ನಾಥ್ ರಾಯ್ ಚೌಧರಿ ಮಾತನಾಡಿ, ಸದ್ಯ ಕ್ಯಾನ್ಸರ್ ಔಷಧಗಳ ಗರಿಷ್ಠ ಲಾಭಾಂಶದ ದರವನ್ನು ಶೇ.30ಕ್ಕೆ ನಿಗದಿಪಡಿಸಲಾಗಿದೆ. ಎಲ್ಲಾ ಔಷಧಗಳಿಗೂ ಈ ಗರಿಷ್ಠ ಲಾಭಾಂಶದ ದರವನ್ನು ವಿಸ್ತರಿಸುವುದಾದರೆ ಹಂತ ಹಂತವಾಗಿ ಅದನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಈ ನಿರ್ಧಾರದಿಂದ ಜನರಿಕ್ ಔಷಧಗಳ ಗರಿಷ್ಠ ರೀಟೇಲ್ ಮಾರಾಟ ಬೆಲೆಗಳನ್ನು (ಎಂಆರ್‌ಪಿ) ಔಷಧ ಕಂಪನಿಗಳು ಕಡಿತಗೊಳಿಸಬೇಕಾಗುತ್ತದೆ. ಹೀಗಾಗಿ ಜನರಿಕ್ ವಿಭಾಗಗಳನ್ನು ಹೊಂದಿರುವ ಸನ್ ಫಾರ್ಮಾ, ಸಿಪ್ಲಾ ಅಂತಹ ಬೃಹತ್ ಔಷಧ ಕಂಪನಿಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.
10 ಸಾವಿರಕ್ಕೂ ಹೆಚ್ಚು ಔಷಧಗಳ ದರ ಇಳಿಕೆ:
ಆರೋಗ್ಯ ಇಲಾಖೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಆರೋಗ್ಯ ಕೇಂದ್ರಗಳು ಔಷಧಗಳ ಮೇಲೆ ಶೇ.70ರಷ್ಟು ವೆಚ್ಚ ಮಾಡುತ್ತದೆ. ಫಾರ್ಮಸಿಟಿಕಲ್ ಇಲಾಖೆ ಪ್ರಕಾರ ಸುಮಾರು 10,600 ನಾನ್ ಷೆಡ್ಯೂಲ್ಡ್ ಔಷಧಿಗಳು ಇವೆ. ಈ ಬಗ್ಗೆ ಕೆಲ ಔಷಧೋದ್ಯಮ ತಜ್ಞರು ಮಾತನಾಡಿ, ಈ ನಾನ್ ಷೆಡ್ಯೂಲ್ಡ್ ಔಷಧಿಗಳು ಬಹುತೇಕ ಸಣ್ಣ ಪಟ್ಟಣ, ಹಳ್ಳಿಗಳಿಗೆ ಸರಬರಾಜು ಆಗುತ್ತದೆ. ಅಲ್ಲಿ ರಿಟರ್ನ್ ಪಾಲಿಸಿ ಇರುವುದಿಲ್ಲ. ಆದ್ದರಿಂದ ವ್ಯಾಪಾರಿಗಳು ಅವಧಿ ಮುಗಿದ ಔಷಧಗಳು ಹಾಗೂ ಹಾಳಾದ ಔಷಧಗಳನ್ನು ಸ್ಟಾಕಿಸ್ಟ್ ಅಥವಾ ಉತ್ಪಾದಕರಿಗೆ ರಿಟರ್ನ್ ಮಾಡಲು ಆಗಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಔಷಧ ನಿಯಂತ್ರಣ ಪ್ರಾಧಿಕಾರ ಕ್ಯಾನ್ಸರ್ ಔಷಧಗಳ ಗರಿಷ್ಠ ಬೆಲೆ ಮೇಲೆ ಮಿತಿ ಹೇರಿದ ಬಳಿಕ ಅವುಗಳ ದರ ಶೇ.85ರಷ್ಟು ಕಡಿಮೆಯಾಗಿದೆ. ಆದರೆ, ವಿಟಮಿನ್-ಡಿ ಮಾತ್ರೆಗಳಿಂದ ಹಿಡಿದು, ಆ್ಯಂಟಿಬಯಾಟಿಕ್ಸ್ ವರೆಗೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಔಷಧಗಳು ಪ್ರಸ್ತುತ ಸರ್ಕಾರದ ದರ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿವೆ. ಹೀಗಿರುವ ಔಷಧಗಳ ಬೆಲೆಗಳು ವಾರ್ಷಿಕ ಗರಿಷ್ಠ ಶೇ.10ರಷ್ಟು ಏರಿಕೆಯಾಗುತ್ತದೆ. ಆದರೆ ಈಗ ಈ ಔಷಧಗಳ ಬೆಲೆಯನ್ನು ಕೂಡ ಸರ್ಕಾರ ಕಡಿಮೆ ಮಾಡಲು ಮುಂದಾಗಿದೆ.
ಲಾಭ ಎಷ್ಟು?
ಭಾರತೀಯ ಔಷಧೋದ್ಯಮದ ಒಟ್ಟು 1 ಲಕ್ಷ ಕೋಟಿ ರೂ. ಇದ್ದು, ಅದರಲ್ಲಿ ನಾನ್ ಷೆಡ್ಯೂಲ್ಡ್ ಔಷಧಗಳ ಮಾರಾಟದ ಮೌಲ್ಯ 10,000 ಕೋಟಿ ರೂ. ಇದೆ. ಪ್ರಸ್ತುತ ನಿಯಂತ್ರಣಕ್ಕೆ ಒಳಪಡದ ಔಷಧಗಳ ಮಾರಾಟದಲ್ಲಿ ಸ್ಟಾಕಿಸ್ಟ್‍ಗಳು ಶೇ.10 ಮಾರ್ಜಿನ್ ಹಾಗೂ ರೀಟೇಲರ್ ಗಳು ಶೇ.20 ಮಾರ್ಜಿನ್ ಪಡೆಯುತ್ತಿದ್ದಾರೆ.
ಈ ನಿಯಮದಿಂದ ಜನರಿಕ್ ಔಷಧಗಳ ಮಾರಾಟದಿಂದ ಬರುವ ಲಾಭದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಔಷಧ ಮಾರಾಟ ಲಾಬಿ ಗುಂಪು, ಈ ನಷ್ಟವನ್ನು ತುಂಬಿಕೊಡುವಂತೆ ಔಷಧ ಕಂಪನಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.
ಈ ಹಿಂದೆ ಕೂಡ ಈ ನಿಯಮ ಜಾರಿಗೆ ಬಂದಾಗ ನಷ್ಟ ಅನುಭವಿಸಿದ ಲಾಬಿ ಗುಂಪುಗಳು ಅದನ್ನು ಭರಿಸಲು ಬೇಡಿಕೆ ಇಟ್ಟಿದ್ದವು. 2013ರಲ್ಲಿ ನಾನ್ ಷೆಡ್ಯೂಲ್ಡ್ ಔಷಧ ಕಂಪನಿಗಳನ್ನು ಬೆಲೆ ನಿಯಂತ್ರಣದ ವ್ಯಾಪ್ತಿಗೆ ತಂದಾಗ, ಸ್ಟಾಕಿಸ್ಟ್ ಗಳು ಮತ್ತು ರೀಟೇಲ್ ಮಾರಾಟಗಾರರು, ತಮಗೆ ಕನಿಷ್ಠ ಶೇ.30 ಮಾರ್ಜಿನ್ ಮುಂದುವರಿಸಬೇಕೆಂದು ಕಂಪನಿಗಳ ಮೇಲೆ ಒತ್ತಡ ಹೇರಿದ್ದರು. ಸರ್ಕಾರ ಬೆಲೆ ನಿಯಂತ್ರಣ ವ್ಯಾಪ್ತಿಗೆ ಒಳಪಡುವ ಔಷಧಗಳ ಮಾರಾಟದ ಮೇಲಿನ ಗರಿಷ್ಠ ಮಾರ್ಜಿನ್ ಅನ್ನು ಶೇ.24 ಕ್ಕೆ ನಿಗದಿಪಡಿಸಿದ್ದರಿಂದ, ತಮಗೆ ನಷ್ಟವಾಗಲಿದೆ ಎಂದು ಹೇಳಿದ್ದರು.
ಅಷ್ಟೇ ಅಲ್ಲದೆ ಸಭೆಯಲ್ಲಿ, 5 ರೂ.ಗಿಂತಲೂ ಕಡಿಮೆ ಬೆಲೆಯ ಔಷಧಗಳಿಗೆ ಶೇ.30 ಮಾರ್ಜಿನ್ ನಿಯಮದಲ್ಲಿ ಒಳಪಡಿಸಬಾರದು ಎಂದು ಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಗ್ರಾಹಕ ಹಕ್ಕು ಕಾರ್ಯಕರ್ತರು ವಿರೋಧಿಸಿದ್ದಾರೆ.