ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಬಂದ್ರೆ ಪ್ರವಾಹ, ಬಿಸಿಲು ಹೊಡೆದರೆ ಬರ. ಬಿಸಿಲ ಹೊಡೆತಕ್ಕೆ ಕರಾವಳಿಯ 20 ಗ್ರಾಮಗಳಲ್ಲಿ ಬಾವಿಗಳು ಬತ್ತಿ ಹೋಗಿದ್ದು, ಒಂದು ತೊಟ್ಟು ನೀರಿಗೂ ಪರದಾಡುವಂತಾಗಿದೆ. ಕಾಲಿ ಕೊಡ ಹಿಡಿದು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.
ಕಾರವಾರ ತಾಲೂಕಿನ ತೋಡುರು ಗ್ರಾಮದಲ್ಲಿ ಪಂಚಾಯಿತಿ ಮಾಡಿದ ಎಡವಟ್ಟಿನಿಂದ, ಕಳೆದ ಎರಡು ತಿಂಗಳಿನಿಂದ ತೋಡುರು ಕಾಲೋನಿಯ ಮನೆಗಳಿಗೆ 10 ರಿಂದ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ, ಇಲ್ಲಿನ ಜನ ಸಮೀಪದಲ್ಲಿರುವ ಬಾವಿ ಹಾಗೂ ಬೋರವೇಲ್‌ಗಳಿಂದ ನೀರು ತಂದು ಜೀವನ ಮಾಡುತ್ತಿದ್ದರು. ಆದರೆ, ಕೆಲವು ದಿನಗಳಿಂದ ಮನೆ ಬಳಿಯ ಬಾವಿಗಳು ಬತ್ತಿ ಹೋಗಿರುವುದರಿಂದ ಕಿಲೋಮೀಟರ್ ಗಟ್ಟಲೇ ದೂರದೂರಿಂದ ನೀರು ತರುವ ಪರಿಸ್ಥಿತಿ ಉಂಟಾಗಿದೆ. ಸಮಿಪದಲ್ಲಿರುವ ಕೆಲವು ಬಾವಿಗಳಲ್ಲಿ ಸ್ವಲ್ಪ ನೀರು ಕಂಡರೆ ಸಾಕು, ಬಂಗಾರ ಸಿಕ್ಕಂತೆ ಖುಷಿ ಪಡುವ ಇಲ್ಲಿನ ಜನ, ಕೆಂಡದಂತಹ ಬಿಸಿಲನ್ನು ಲೆಕ್ಕಿಸದೆ ಅರ್ಧ ಬಿಂದಿಗೆ ನೀರಿಗಾಗಿ, ಹತ್ತಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ನೀರು ಪಡೆಯುತ್ತಾರೆ.
ಕಳೆದ 35 ವರ್ಷಗಳ ಹಿಂದೆ ನೌಕಾನೆಲೆ ನಿರ್ಮಾಣಕ್ಕಾಗಿ 13 ಹಳ್ಳಿಗಳನ್ನು ತೋಡುರು ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮೂಲಭೂತ ಸೌಕರ್ಯಗಳನ್ನು ಮಾತ್ರ ಸಮರ್ಪಕವಾಗಿ ನೀಡದೆ ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಇದರ ಪ್ರತಿಫಲವಾಗಿ ಮಳೆ ಬಂದರೇ ಗ್ರಾಮವೇ ಮುಳುಗಿ ಹೋಗುತ್ತದೆ. ಬೇಸಿಗೆ ಬಂದರೇ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ. ಇನ್ನೂ, ಜೆ.ಜೆ.ಎಮ್ ಯೋಜನೆ ಅನುಷ್ಟಾನ ಸಂದರ್ಭದಲ್ಲಿ ಪೈಪ್ ಕನೆಕ್ಷನ್ ಮಾಡುವಾಗ ಆದ ತಪ್ಪಿನಿಂದ ನಲ್ಲಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಜಲಮೂಲಗಳು ಬತ್ತಿ ಹೋಗುತ್ತವೆ. ಹೀಗಾಗಿ, ಕಳೆದ ನಾಲ್ಕೈದು ವರ್ಷಗಳಿಂದ ಈ ಜನ ಮಳೆ ಮತ್ತು ಬಿಸಿಲಿನಿಂದ ಪರಿತಪಿಸುತ್ತಾ ಜೀವನ ಮಾಡುವಂತಾಗಿದೆ.
ಇದು ಕಾರವಾರ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ. ಅಂಕೋಲ, ಕುಮಟಾ, ಹೊನ್ನಾವರ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಜಿಲ್ಲೆಯ 20 ಗ್ರಾಮಗಳಲ್ಲಿ ಜಲಮೂಲ ಬತ್ತಿಹೋಗಿದ್ದು, ಕುಡಿಯುವ ನೀರು ಸ್ಥಳೀಯ ಸಂಸ್ಥೆಗಳಿಂದ ಪೂರೈಕೆ ಆಗುತ್ತಿಲ್ಲ. ಇದರಿಂದ ಖಾಸಗಿಯಾಗಿ ಕುಡಿಯುವ ನೀರು ತರಬೇಕಿದ್ದು, ಒರುವ ನೀರಿಗೆ ಹಣ ಸಂದಾಯ ಮಾಡಬೇಕಿದೆ. ಜಿಲ್ಲೆಯಲ್ಲಿ ಸದ್ಯ 20 ಗ್ರಾಮಗಳು ಅತೀ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, 411 ಗ್ರಾಮಗಳಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದರೆ, ಇದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆಯೇ ಆಗಿಲ್ಲ. ಹೀಗಾಗಿ, ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳ ಸಭೆ ನಡೆಸಿದ್ದು, ಕುಡಿಯುವ ನೀರು ಪೂರೈಕೆಗೆ ಬೇಕಾದ ಹಣ ನಮ್ಮ ಬಳಿ ಇದೆ. ಸೂಕ್ತ ವ್ಯವಸ್ಥೆ ಮಾಡದೇ ದೂರುಗಳು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾರೂ ಖಾಸಗಿಯಾಗಿ ನೀರು ಖರೀದಿ ಮಾಡಬಾರದು ಎಂದು ಹೇಳಿದ್ದಾರೆ.