Connect with us

Districts

ಮೈಲುಗಟ್ಟಲೇ ನಡೆದರು ಸಿಗದ ಜೀವಜಲ: ಬಿಸಿಲನಾಡು ರಾಯಚೂರಲ್ಲಿ ಹನಿ ಹನಿಗೂ ಹಾಹಾಕಾರ

Published

on

-ಗಬ್ಬು ವಾಸನೆಯ ಹಳ್ಳದ ಚಿಲುಮೆ ನೀರನ್ನೇ ನಂಬಿರುವ ಹಳ್ಳಿಜನ
-ಜನರಿಗೆ ತಲುಪಲೇ ಇಲ್ಲಾ ಸರ್ಕಾರಗಳ ಸಾವಿರಾರು ಕೋಟಿ ರೂ.ಯೋಜನೆಗಳು

ವಿಜಯ್ ಜಾಗಟಗಲ್

ರಾಯಚೂರು: ಬಿಸಿಲನಾಡು ರಾಯಚೂರು ಕಳೆದ ಎಂಟತ್ತು ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲವನ್ನ ಅನುಭವಿಸುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ನೀರಿಗಾಗಿ ಪರದಾಟ ಶುರುವಾಗಿದೆ. ಮಾರ್ಚ್ ತಿಂಗಳಲ್ಲೇ ಇಡೀ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಅವಶ್ಯಕತೆಗೆ ಅನುಗುಣವಾಗಿ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ವೈಫಲ್ಯ ಕಂಡಿದೆ. ಟ್ಯಾಂಕರ್ ಮೂಲಕ ನೀರನ್ನ ಸರಬರಾಜು ಮಾಡಲೇ ಬೇಕಾದ 68 ಗ್ರಾಮಗಳನ್ನ ಜಿಲ್ಲಾಡಳಿತ ಗುರುತಿಸಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಜಿಲ್ಲೆಯ ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸುಗೂರು ತಾಲೂಕುಗಳಲ್ಲಿನ 268 ಕೆರೆಗಳಲ್ಲಿ ಅರ್ಧದಷ್ಟು ಕೆರೆಗಳು ಖಾಲಿಯಾಗಿವೆ. ಜಿಲ್ಲೆಯಲ್ಲಿ ಹರಿಯುವ ತುಂಗಭದ್ರೆ ಕೃಷ್ಣ ನದಿಗಳು ಹಾಗೂ ಹಳ್ಳಗಳು ಸಂಪೂರ್ಣ ಭತ್ತಿಹೋಗಿವೆ. ಹೀಗಾಗಿ ಜಿಲ್ಲೆಯ ಸಿಂಧನೂರು ನಗರಕ್ಕೆ ಅಲ್ಲಿನ ನಗರಸಭೆ ವಾರಕ್ಕೆ ಒಂದು ಬಾರಿ ನೀರನ್ನ ಕೊಡುತ್ತಿದೆ. ಉಳಿದ ನಗರ ಪಟ್ಟಣಗಳಲ್ಲಿ ಮೂರು ಅಥವಾ ನಾಲ್ಕು ದಿನಕ್ಕೆ ಒಂದು ಬಾರಿ ನೀರನ್ನ ಹರಿಸಲಾಗುತ್ತಿದೆ.

ಇನ್ನೂ ಗ್ರಾಮೀಣ ಭಾಗದ ಪರಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಜಿಲ್ಲೆಯ ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕಿನಲ್ಲಿ ಎಂದೂ ಕಂಡರಿಯದಷ್ಟು ನೀರಿನ ಸಮಸ್ಯೆ ಎದುರಾಗಿದೆ. ದೇವದುರ್ಗದ ಸಲಿಕಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ಷರಶಃ ಜಲಕ್ಷಾಮ ಎದುರಾಗಿದೆ. ಲಿಂಗಸುಗೂರು ತಾಲೂಕಿನ ದಂತೆರದೊಡ್ಡಿ, ಸೂರುಗುದೊಡ್ಡಿ, ಆಂಡಲಗೇರಿದೊಡ್ಡಿ, ಹುಬ್ಬಳ್ಳೋರಿದೊಡ್ಡಿ, ಮಕಾಶೆರ್ ದೊಡ್ಡಿ, ಕುರುಬರದೊಡ್ಡಿ, ಮುಸಲ್ಮಾನರ ದೊಡ್ಡಿಗಳು ಎಂದೂ ಸಮೃದ್ಧ ನೀರನ್ನ ನೋಡೆಯಿಲ್ಲ. ಮಳೆಗಾಲ, ಚಳಿಗಾಲದಲ್ಲಿ ಹಳ್ಳದಲ್ಲೇ ಹೆಚ್ಚು ನೀರು ಹರಿಯುವುದರಿಂದ ಅಷ್ಟೊಂದು ತೊಂದರೆಗಳನ್ನ ಅನುಭವಿಸುವುದಿಲ್ಲ. ಆದ್ರೆ ಬೇಸಿಗೆಯಲ್ಲಿ ಹಳ್ಳಗಳು ಬತ್ತುವುದರಿಂದ ನೀರಿಗಾಗಿ ಅಕ್ಕಪಕ್ಕದ ಊರುಗಳಿಗೆ ಮೈಲುಗಟ್ಟಲೆ ನಡೆದು ನೀರನ್ನ ತರಬೇಕಾಗುತ್ತದೆ. ಚಿಕ್ಕಮಕ್ಕಳು, ವಯೋವೃದ್ದರು ಕೊಡಗಳನ್ನ ಹಿಡಿದು ನೀರಿಗಾಗಿ ಬೆಳಿಗ್ಗೆಯಿಂದಲೇ ಶೋಧ ಆರಂಭಿಸುತ್ತಾರೆ.

ಹಳ್ಳದ ನೀರು ಆಸರೆ: ಹಳ್ಳಗಳಲ್ಲೇ ಆಳವಾಗಿ ಚಿಲುಮೆಗಳನ್ನ ತೋಡಿ ನೀರು ತರುತ್ತಿದ್ದಾರೆ. ಆದ್ರೆ ನೀರು ಕೊಳಚೆ ವಾಸನೆ ಬೀರುವುದಲ್ಲನ್ನೆ ಹಲವಾರು ಆರೋಗ್ಯ ಸಮಸ್ಯೆಗಳನ್ನೂ ಉಂಟುಮಾಡುತ್ತಿದೆ. ಮತದಾನ ಗುರುತಿನ ಚೀಟಿ, ಆಧಾರ ಕಾರ್ಡ್‍ಹೊಂದಿರುವ ಇಲ್ಲಿನ ಜನರನ್ನ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮನುಷ್ಯರು ಅಂತ ಭಾವಿಸಿದ ಹಾಗೇ ಕಾಣಿಸುತ್ತಿಲ್ಲ. ಯಾಕಂದ್ರೆ ಇಲ್ಲಿನ ಬಹಳ ಗ್ರಾಮಗಳಿಗೆ ಕನಿಷ್ಠ ಮಟ್ಟದ ರಸ್ತೆಯೂ ಇಲ್ಲ. ಇನ್ನೂ ಉಳಿದ ಸೌಲಭ್ಯಗಳ ಮಾತು ತುಂಬಾನೇ ದೂರ. ಕೃಷಿ ಹಾಗೂ ಕಟ್ಟಿಗೆ ಸೌದೆ ಮಾರಾಟವನ್ನೇ ನಂಬಿ ಬದುಕುತ್ತಿರುವ ಈ ದೊಡ್ಡಿಗಳ ಜನರಿಗೆ ಪದೇ ಪದೇ ಅಪ್ಪಳಿಸುತ್ತಿರುವ ಬರಗಾಲದಿಂದ ಬರಸಿಡಿಲು ಬಡಿಬಡಿದಂತಾಗಿದೆ.

ಕುಡಿಯುವ ನೀರಿಗಾಗಿ ಜಿಲ್ಲಾಪಂಚಾಯ್ತಿ ಕಾರ್ಯಪಡೆಗೆ 3 ಕೋಟಿ 40 ಲಕ್ಷ , ನಗರಸಭೆ ಹಾಗೂ ಪುರಸಭೆಗಳಿಗೆ 3 ಕೋಟಿ 47 ಲಕ್ಷ ಹಾಗೂ ಸಿಆರ್‍ಎಫ್ ಅನುದಾನ 3 ಕೋಟಿ 60 ಲಕ್ಷ ಬಂದಿದೆ. ಕೂಡಲೇ ಕ್ರಿಯಾ ಯೋಜನೆ ರೂಪಿಸಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಅಂತ ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ. ಆದ್ರೆ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜನ ಕುಡಿಯುವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ. ಕನಿಷ್ಠ ಈಗಲಾದ್ರೂ ಅಧಿಕಾರಿಗಳು ಕಾರ್ಯಪ್ರವೃತ್ತರಾದ್ರೆ ಜನರ ಸಮಸ್ಯೆಗೆ ಪರಿಹಾರ ಸಿಗಬಹುದು.

 

Click to comment

Leave a Reply

Your email address will not be published. Required fields are marked *

www.publictv.in