Connect with us

ರಾಯಚೂರಿನಲ್ಲಿ ಭೀಕರ ಬರಗಾಲ: ಕಸಾಯಿಖಾನೆ ಪಾಲಾಗುತ್ತಿರುವ ಜಾನುವಾರುಗಳು

ರಾಯಚೂರಿನಲ್ಲಿ ಭೀಕರ ಬರಗಾಲ: ಕಸಾಯಿಖಾನೆ ಪಾಲಾಗುತ್ತಿರುವ ಜಾನುವಾರುಗಳು

ರಾಯಚೂರು: ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ರೈತರು ತಾವು ಸಾಕಿದ ಜಾನುವಾರುಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ದನಗಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಿಲ್ಲಾರಿ, ಕಂಬಾರಿ, ದುಪ್ಪಟ್ಟಿ, ಸೀಮೆ ಸೇರಿ ವಿವಿಧ ಜಾತಿಯ ಎತ್ತು ಹಾಗೂ ಹಸುಗಳು ಕಡಿಮೆ ಬೆಲೆಯಲ್ಲಿ ಕಸಾಯಿಖಾನೆ ಪಾಲಾಗುತ್ತಿವೆ.

ಮಳೆರಾಯನ ಅವಕೃಪೆಯಿಂದ ರಾಯಚೂರು ಜಿಲ್ಲೆಯ ರೈತರು ಬದುಕು ಸಾಗಿಸಲು ನಿತ್ಯ ಕಸರತ್ತು ಮಾಡುತ್ತಿದ್ದಾರೆ. ಒಂದು ಕಡೆ ಹೊಲದಲ್ಲಿ ಬೆಳೆಯಿಲ್ಲ ಇನ್ನೊಂದೆಡೆ ಬ್ಯಾಂಕ್‍ನಲ್ಲಿ ಸಾಲ ಬೆಳೆಯುತ್ತಿದೆ. ಹೀಗಾಗಿ ಮಕ್ಕಳಂತೆ ಸಾಕಿ ಬೆಳೆಸಿದ ಜಾನುವಾರುಗಳನ್ನ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುತ್ತಿದ್ದಾರೆ. ಇನ್ನು ಹೊಲದಲ್ಲಿ ಕೆಲಸವೇ ಇಲ್ಲದೆ ರೈತರು ನಗರ ಪ್ರದೇಶಗಳಿಗೆ ಗುಳೆ ಹೊರಡುವ ಪರಸ್ಥಿತಿಯೂ ಇದೆ.

ಲಕ್ಷಾಂತರ ರೂಪಾಯಿಗೆ ಕೊಂಡ ಜಾನುವಾರುಗಳನ್ನ ಕೇವಲ ಸಾವಿರಾರು ರೂಪಾಯಿಗೆ ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿರುವುದರಿಂದ ಬೆಳೆ ಬೆಳೆಯುವುದಿರಲಿ, ಕುಡಿಯಲು ಸಹ ನೀರು ಸಿಗದಂತಾಗಿದೆ. ಜಾನುವಾರಿಗಳಿಗೆ ಮೇವು ಸಿಗದಿರುವುದರಿಂದ ಎತ್ತು, ಆಕಳು, ಎಮ್ಮೆಗಳನ್ನ ಒಲ್ಲದ ಮನಸ್ಸಿನಿಂದ ಮಾರಾಟ ಮಾಡುತ್ತಿದ್ದಾರೆ. ಆದ್ರೆ ರೈತರು ಅರ್ಧ ಬೆಲೆಗೆ ಮಾರಲು ತಯಾರಿದ್ದರೂ ಮೇವು, ನೀರಿನ ಕೊರತೆಯಿಂದಾಗಿ ಜಾನುವಾರು ಸಂತೆಗಳಲ್ಲಿ ಕೊಳ್ಳುವವರ ಸಂಖ್ಯೆಯೂ ಕಡಿಮೆಯಿದೆ.

ಜಾನುವಾರುಗಳನ್ನ ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುವ ಪ್ರಯತ್ನದಲ್ಲಿರುವ ರೈತರ ಕೈಗೆ ಸಿಗುತ್ತಿರುವುದು ಕೇವಲ ಹತ್ತಿಪ್ಪತ್ತು ಸಾವಿರ ರೂಪಾಯಿ ಮಾತ್ರ. ಜಿಲ್ಲೆಯಲ್ಲಿ ಒಟ್ಟು 4 ಲಕ್ಷ 95 ಸಾವಿರದ 978 ಜಾನುವಾರುಗಳಿದ್ದು, 4 ಲಕ್ಷ ಮೆಟ್ರಿಕ್ ಟನ್ ಮೇವು ಸಂಗ್ರಹವಿದೆ. ಆದ್ರೆ ಜಾನುವಾರುಗಳಿಗೆ ಮೇವಿನ ಕೊರತೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ನೀರು ಹಾಗೂ ಮೇವಿನ ಸಮಸ್ಯೆಯಿಂದ ಜಾನುವಾರು ಕೊಳ್ಳುವವರು ಮುಂದೆ ಬರುತ್ತಿಲ್ಲ. ಹೀಗಾಗಿ ಸಿಕ್ಕಷ್ಟು ಬೆಲೆಗೆ ಜಾನುವಾರುಗಳನ್ನ ರೈತರು ಕಸಾಯಿಖಾನೆಗೆ ಮಾರುತ್ತಿದ್ದಾರೆ.

ಒಟ್ನಲ್ಲಿ, ವರುಣನ ಮುನಿಸಿನಿಂದ ಜಮೀನು ಕೈಹಿಡಿಯುತ್ತಿಲ್ಲ. ಇತ್ತ ಸರ್ಕಾರದ ಬೆಳೆಹಾನಿ ಪರಿಹಾರವೂ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ರೈತರು ಜಾನುವಾರುಗಳನ್ನ ಸಾಲಭಾರ ತಾಳದೇ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಭೀಕರ ಬರಗಾಲ ಎದುರಾಗುವ ಮುನ್ಸೂಚನೆಯಿದ್ದು ರೈತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ.

 

Advertisement
Advertisement