ಬೆಂಗಳೂರು: ನೀರಿಲ್ಲದೇ ಹೈರಾಣಾಗಿರುವ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದ್ದ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ರೆಸಾರ್ಟಿಗೆ ತೆರಳಲು ಮುಂದಾಗುತ್ತಿರುವುದ್ದಕ್ಕೆ ವ್ಯಾಪಕ ಟೀಕೆ ಬಂದಿದೆ
ಹೌದು, ಲೋಕಸಭಾ ಚುನಾವಣೆಯಲ್ಲಿ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದ ಸಿಎಂ ಕುಮಾರಸ್ವಾಮಿ ಅವರು ಉಡುಪಿಯ ರೆಸಾರ್ಟಿನಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದಿದ್ದರು. ಚಿಕಿತ್ಸೆಯ ಬಳಿಕ ಬೆಂಗಳೂರಿಗೆ ಆಗಮಿಸಿದ್ದ ಸಿಎಂ ಮತ್ತೆ ವಿಶ್ರಾಂತಿಗೆ ರೆಸಾರ್ಟಿಗೆ ತೆರಳಲು ನಿರ್ಧರಿಸಿದ್ದಾರೆ.
ಲೋಕ ಮತದಾನದ ಬಳಿಕ ರೆಸಾರ್ಟ್ ಹಾಗೂ ದೇವಾಲಯ ಭೇಟಿ ನೀಡಿ ವಿಶೇಷ ಪೂಜೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಅವರು ತಮಿಳುನಾಡಿಗೂ ತೆರಳಿ ವಿಶೇಷ ಪೂಜೆ ನಡೆಸಿದ್ದರು. ಸದ್ಯ ವಾರದ ಅಂತಿಮ 2 ದಿನಗಳಲ್ಲಿ ಮತ್ತೆ ವಿಶ್ರಾಂತಿಗೆ ತೆರಳಲು ನಿರ್ಧರಿಸಿರುವ ಸಿಎಂ ಮಡಿಕೇರಿಯ ರೆಸಾರ್ಟಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕೆಲ ದಿನಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಡಿಕೇರಿಯ ಮೈಸೂರು ರಸ್ತೆಯಲ್ಲಿ ಇರುವ ಇಬ್ಬನಿ ರೆಸಾರ್ಟಿನಲ್ಲಿ ತಂಗಿದ್ದರು. ಈಗ ಕುಮಾರಸ್ವಾಮಿಯವರು ಆ ರೆಸಾರ್ಟಿನಲ್ಲೇ ತಂಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಸುಮಾರು 120 ತಾಲೂಕುಗಳಲ್ಲಿ ಬರ ಸಮಸ್ಯೆ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಭಾಗದ ಹಲವು ಭಾಗಗಳಲ್ಲಿ ಜನರು ಹನಿ ನೀರಿಗೂ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ಬಹುತೇಕ ಹಳ್ಳಿಗಳಲ್ಲಿ ಜಾನುವಾರುಗಳಿಗೆ ಮೇವಿಲ್ಲದೇ ರೈತರು ಚಿಂತೆ ನಡೆಸುತ್ತಿದ್ದಾರೆ. ಆದರೆ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೈಗೊಳ್ಳಬೇಕಿದ್ದ ಸಿಎಂ ಮಾತ್ರ ಪುತ್ರನ ರಾಜಕೀಯ ಭವಿಷ್ಯದ ಚಿಂತನೆಯಲ್ಲಿ ಟೆಂಪಲ್ ರನ್ ಹಾಗೂ ರೆಸಾರ್ಟ್ ರಾಜಕೀಯ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ರಾಜ್ಯ ಕೆಲ ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರೂ ಕೂಡ ಬಿತ್ತನೆ ಕಾರ್ಯ ನಡೆದ ಪ್ರದೇಶದಲ್ಲಿ ತೇವಾಂಶದ ಸಮಸ್ಯೆ ಎದುರಾಗಿದೆ. ಇತ್ತ ರಾಜ್ಯದ ಜನರ ಸಮಸ್ಯೆಗಳನ್ನು ಸರ್ಕಾರದ ಮುಂದಿಡಬೇಕಾದ ವಿಪಕ್ಷಗಳು ಕೂಡ ಈ ಕಾರ್ಯದಲ್ಲಿ ಯಶಸ್ವಿಯಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರ ಸಭೆ ನಡೆಸಿ ಬರದ ಮಾಹಿತಿ ನೀಡುವಂತೆ ತಿಳಿಸಿದ್ದು ಬಿಟ್ಟರೆ ಬೇರೆ ಪ್ರಗತಿ ಆಗಿಲ್ಲ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾಕರಂದ್ಲಾಜೆ ಅವರು, ರಾಜ್ಯದಲ್ಲಿ ಬಂಡ ಸರ್ಕಾರ ಆಡಳಿತ ನಡೆಸುತ್ತಿದ್ದು, ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನೇ ಮರೆತಿದೆ. ವಿಪಕ್ಷ ಸ್ಥಾನದಲ್ಲಿ ಕುಳಿತು ನಾಯಕರು ಎಷ್ಟೇ ಹೋರಾಟ ನಡೆಸಿದರೂ ಕೂಡ ಸಿಎಂ ಅವರಿಗೆ ಮಗನ ರಾಜಕೀಯ ಭವಿಷ್ಯದ ಚಿಂತೆ ಆಗಿದೆ ಎಂದು ಆರೋಪಿಸಿದರು. ಇತ್ತ ಜೆಡಿಎಸ್ ಮುಖಂಡ ಶರವಣ ಅವರು ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಆದರೆ ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಅಧಿಕಾರಿಗಳು ಕೂಡ ಕಾರ್ಯದಲ್ಲಿ ತೊಡಗಿದ್ದರು. ಆದ್ದರಿಂದಲೇ ಕೆಲ ಪ್ರದೇಶಗಳಲ್ಲಿ ಸರ್ಕಾರ ಕಾರ್ಯ ತಲುಪಲು ನಿಧಾನವಾಗಿದೆ. ಜನರ ಸಮಸ್ಯೆ ನಿವಾರಣೆ ಹಾಗೂ ಬರ ಪರಿಹಾರ ಕಾರ್ಯದಲ್ಲಿ ರಾಜ್ಯ ಸರ್ಕಾರ ತೊಡಗಿದೆ ಎಂದು ಸ್ಪಷ್ಟನೆ ನೀಡಿದರು.