ಮುಕ್ಕಣ್ಣ ಕತ್ತಿ
ಕೊಪ್ಪಳ: ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆ. ಈ ಜಿಲ್ಲೆಯಲ್ಲಿ ಬಿರು ಬಿಸಿಲಿಗೆ ಒಣಗಿ ಬಾಯಿಬಟ್ಟಿರೋ ಹೊಲ, ಕೆರೆಗಳು.. ಉದ್ಯೋಗ ಅರಿಸಿ ಗುಳೆಹೋಗಿ ಖಾಲಿ ಹೊಡೆಯುತ್ತಿರೋ ತಾಂಡಾಗಳು. ರಣ ರಣ ಬಿಸಿಲಿನಲ್ಲಿ ಬದುಕನ್ನರಿಸಿ ಹೊರಟ ಜೀವಗಳು.. ಇವೆಲ್ಲಾ ಕೊಪ್ಪಳ ಜಿಲ್ಲೆಯ ಬರದ ಭೀಕರತೆ..ಕೊಪ್ಪಳ ಅಂದ್ರೆ ಬರ.. ಬರ ಅಂದ್ರೆ ಕೊಪ್ಪಳ ಅನ್ನುವಷ್ಟರ ಮಟ್ಟಿಗೆ ಬರ ತಾಂಡವಾಡ್ತಿದೆ.
Advertisement
Advertisement
ಹೌದು. ಕೊಪ್ಪಳ ಜಿಲ್ಲೆಯಲ್ಲೀಗ ಭೀಕರ ಬರಗಾಲದ ಕರಿ ಛಾಯೆ ಆವರಿಸಿದೆ. ಕಳೆದ 42 ವರ್ಷಗಳಲ್ಲಿಯೇ ಭೀಕರ ಅನ್ನುವಂತಹ ಬರಗಾಲ ಈ ಬಾರಿ ಕೊಪ್ಪಳ ಜಿಲ್ಲೆಯನ್ನ ಕಾಡ್ತಿದೆ. ಕುಡಿಯೋ ನೀರಿಗೆ ತಾತ್ವಾರ, ಹೊಲ ಗದ್ದೆಗಳೆಲ್ಲಾ ಒಣಗಿ ಹೋಗಿವೆ. ಕೆರೆಗಳೆಲ್ಲಾ ಬಿರುಕು ಬಿಟ್ಟಿವೆ. ಇಂತಹ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ತಬ್ಧವಾಗಿ ಹೊಲಗಳು ರಣಗುಡ್ತಿವೆ.
Advertisement
Advertisement
ಕಳೆದ 15 ವರ್ಷಗಳಲ್ಲಿ 11 ವರ್ಷ ಕೊಪ್ಪಳ ಜಿಲ್ಲೆಗೆ ಬರ ಅಂಟಿಕೊಂಡಿದೆ. ಕೊಪ್ಪಳ ಜಿಲ್ಲೆಯ ಉತ್ತರ ಒಣವಲಯ 3ರ ಅಡಿಯಲ್ಲಿ ಬರುತ್ತದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 599.80 ಮಿ.ಮಿ ಇದೆ. ಶೇ.55, ಶೇ.60 ಕೆಂಪು ಭೂಮಿ ಉಳಿದಂತೆ ಕಪ್ಪು ಭೂಮಿ ಹೊಂದಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ರಿಂದ ಸೆಪ್ಟೆಂಬರ್ ವರಗೆ ವಾಡಿಕೆ ಮಳೆ 376 ಮಿಮೀ ಬೀಳಬೇಕಿತ್ತು. ಆದ್ರೆ ವಾಸ್ತವಿಕವಾಗಿ ಆಗಿದ್ದು 317 ಮಿ.ಮಿ ಅಂದ್ರೆ ಶೇ.16 ರಷ್ಟು ಕೊರತೆ ಇತ್ತು. ಮುಂದೆ ಹಿಂಗಾರಿನಲ್ಲಿ ವಾರ್ಷಿಕ ವಾಡಿಕೆ ಮಳೆ 142 ಮಿ.ಮಿ ಇತ್ತು. ಆಗಿದ್ದು ಮಾತ್ರ ಕೇವಲ `18 ಮಿಮಿ ಅಂದ್ರೆ 87% ರಷ್ಟು ಮಳೆಯ ಕೊರತೆ. ಇದರಿಂದಾಗಿ ಒಣಬೇಸಾಯ ಆಧಾರಿತ ಜಿಲ್ಲೆಯಾಗಿರೋ ಕೊಪ್ಪಳ ಭೀಕರ ಬರಗಾಲಕ್ಕೆ ತುತ್ತಾಗಿದೆ ಅಂತಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳ್ತಾರೆ.
ಇನ್ನು ಮುಂಗಾರು ಬಿತ್ತನೆ ಕ್ಷೇತ್ರ 2,52,500 ಹೆಕ್ಟೆರ್ ಇದ್ದು, ಈ ಸಲದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದು 2,67,235 ಹೆಕ್ಟೆರ್ ಅಂದರೆ 105% ರಷ್ಟು ಬಿತ್ತನೆಯಾಗಿತ್ತು. ಯಾಕೆಂದರೆ ಮುಂಗಾರು ಆರಂಭದಲ್ಲಿ ಜೋರಾಗಿ ಸುರಿದಿದ್ದು ರೈತರಲ್ಲಿ ಆಶಾಭಾವನೆ ಹುಟ್ಟಿಸಿತ್ತು. ಇದರಲ್ಲಿ ಬರಗಾಲಕ್ಕೆ ತುತ್ತಾಗಿರುವ ಪ್ರದೇಶ 19,00,037 ಹೆಕ್ಟೆರ್ ಪ್ರದೇಶದಲ್ಲಿ ಹಾನಿ ಸಂಭವಿಸಿತ್ತು. ಅದೇ ರೀತಿ ಹಿಂಗಾರು ಬಿತ್ತನೆ ಕ್ಷೇತ್ರ 1,52,200 ಹೆಕ್ಟೆರ್ ಇದೆ. ಪ್ರಸಕ್ತ ಹಿಂಗಾರಿನಲ್ಲಿ ಶೇ.65 ಬಿತ್ತನೆಯಾಗಿತ್ತು. ಇದು ಸಂಪೂರ್ಣವಾಗಿ ಮಳೆಯಾಶ್ರಿತ ಪ್ರದೇಶವಾಗಿತ್ತು. ಇದ್ರಲ್ಲಿ ಶೇ.100 ಹಾನಿಗೊಳಗಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಜ್ಜೆ ಜೋಳ, ಸಜ್ಜೆ, ಹೆಸರು, ತೊಗರಿ, ಶೆಂಗಾ, ಸೂರ್ಯಕಾಂತಿ, ಕಡಲೆ, ಹುರುಳಿ ಕುಸುಬೆ, ಜೋಳದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಇಡೀ ಜಿಲ್ಲೆಯ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಉಂಟಾಗಿದೆ.
ಡ್ಯಾಂನಲ್ಲಿರೋದು 4 ಟಿಎಂಸಿ: ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಾಗಿರೋ 126.55 ಕೋಟಿಯಷ್ಟು ಬೆಳೆ ಹಾನಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿಂಗಾರಿನಲ್ಲಿ ಬೆಳೆ ಹಾನಿಯಾಗಿರೋ ನಷ್ಟ ಒಟ್ಟು 66.42 ಕೋಟಿಯಷ್ಟು ಅಂದಾಜಿಸಿದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಾಗಿರೋ ಬೆಳೆಹಾನಿ ಪ್ರದೇಶಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಜಿಲ್ಲೆಯ ವಾಸ್ತವ ಬರ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದೆ. ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಾದ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ ಬರಪೀಡಿತ ಪ್ರದೇಶ ಅಂತ ಘೋಷಣೆ ಆಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿರೋದ್ರಿಂದ 180 ಕೋಟಿಗೂ ಅಧಿಕ ಅನುದಾನ ನೀಡಲು ಸರಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ.
ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರೆ ತಳ ಕಂಡಿದೆ. ಈ ಸಲ ಎರಡನೇ ಬೆಳೆಗೆ ನೀರು ನೀಡದೆಯಿರೋದ್ರಿಂದ ನೀರಾವರಿಯ ರೈತರು ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಈಗ ಡ್ಯಾಂನಲ್ಲಿರೋದು ನೀರು ಕೇವಲ 4 ಟಿಎಂಸಿಯಷ್ಟು. ಈ ನೀರು ಮೂರು ಜಿಲ್ಲೆಗಳ ಜನರ ನೀರಿನ ದಾಹವನ್ನ ಜೂನ್ ರವರೆಗೆ ತೀರಿಸಬೇಕಿದೆ. ಈಗಾಗ್ಲೆ ಕೊಪ್ಪಳ ನಗರ ಕೂಡಾ ತುಂಗಭದ್ರಾ ಡ್ಯಾಂನಿಂದ ಬರೋ ನೀರಿಗೆ ತತ್ವಾರ ಎದುರಾಗಿದೆ.
ಗುಳೆ ಪರ್ವ ಆರಂಭ: ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಿರೋ ಹಲವಾರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಗಳೇ ಇಲ್ಲ. ಏನಿದ್ರೂ ಹೊರಗಿನವರದೇ ಕಾರುಬಾರು. ಜಿಲ್ಲೆಯಲ್ಲಿ ಎಲ್ಲೂ ಕೆಲಸವೇ ಇಲ್ಲ. ಬೇರೆ ದಾರಿ ಕಾಣದೆ ಅನ್ನಕ್ಕಾಗಿ, ಕೂಲಿಗಾಗಿ ಜನರು ಗುಳೆ ಹೊರಟಿದ್ದಾರೆ. ಕೇವಲ ಕೆಲವೇ ಜನರಲ್ಲ ಊರಿಗೆ ಊರೇ ಗುಳೆ ಹೊರಟಿದೆ.
ಕೊಪ್ಪಳ ಜಿಲ್ಲೆಯಲ್ಲಿ ಸಾವಿರಾರು ಜನ ಗುಳೆ ಹೊರಟಿದ್ದಾರೆ, ಹೋಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಗುಳೆ ಪರ್ವ ಆರಂಭವಾಗ್ತಿದೆ. ಇದು ಕೊಪ್ಪಳ ಜಿಲ್ಲೆಯಲ್ಲಿ ಸ್ವಾಭಾವಿಕ ಪ್ರಕ್ರಿಯೆಯಾಗಿ ಹೋಗಿರುವುದು ನಾಚಿಕೆಗೇಡಿನ ಸಂಗತಿ. ಸರಕಾರದ ಅಧಿಕೃತ ಮಾಹಿತಿ ಪ್ರಕಾರ 2015-16 ಸಾಲಿನಲ್ಲಿ ವಲಸೆ ಹೋದ ಕುಟುಂಬಗಳ ಸಂಖ್ಯೆ 6,000 ಕ್ಕೂ ಹೆಚ್ಚು. ವಲಸೆ ಹೋದ ಕುಟುಂಬದ ಸದಸ್ಯರ ಸಂಖ್ಯೆ 13682. ಅಂದ್ರೆ ನಿಜವಾದ ಸಂಖ್ಯೆ ಇದರ ಮೂರು ಪಟ್ಟು ಹೆಚ್ಚಿದೆ. ಈ ಸಲವಂತೂ ಹತ್ತುಪಟ್ಟು ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯ ಹಲವಾರು ಗ್ರಾಮಗಳು, ತಾಂಡಾಗಳಲ್ಲಿ ಜನರೇ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಕೊಪ್ಪಳ ಜಿಲ್ಲೆಯ ಯಲಮಗಿರಿ, ಕುಣಕೇರಿ ತಾಂಡಾ ಗುಳೆ ಹೋಗುವ ಕಾರಣಕ್ಕೆ ಹೆಸರು ಮಾಡುತ್ತೆ. ಈ ಊರಿನಲ್ಲಿ ಸರಕಾರದ ಯಾವುದೇ ಯೋಜನೆಗಳು ತಲುಪಿಲ್ಲ. ಅಂದಾಜು 300-400 ಜನರಿರೋ ಈ ತಾಂಡಾದ ಶೇ.90ರಷ್ಟು ಜನ ಗುಳೆ ಹೋಗಿದ್ದಾರೆ.
ಗುಳೆ ಹೋಗಲು ಕಾರಣ?: ಹೆಚ್ಚಿನ ದುಡಿಮೆಗಾಗಿ ಗುಳೆ ಹೋಗೋದು, ಮಕ್ಕಳ ಶಿಕ್ಷಣ ಇಲ್ಲವೇ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಒಂದೆಡೆಯಾದ್ರೆ, ಊರಲ್ಲಿ ಕೆಲಸವಿಲ್ಲದೇ ಕೂಲಿಗೂ ಗತಿಯಿಲ್ಲದೇ ಕನಿಷ್ಠ ಪಕ್ಷ ಬದುಕಿದರೆ ಸಾಕು, ದಿನದ ಅನ್ನವನ್ನಾದರೂ ಹುಟ್ಟಿಸಿಕೊಂಡರೇ ಸಾಕು ಎನ್ನುವ ಪರಿಸ್ಥಿತಿಯಲ್ಲಿ ಊರು ಬಿಟ್ಟು ಬೇರೆ ಬೇರೆ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ.
ಕಬ್ಬು ಕಟಾವು, ಗೌಂಡಿ ಕೆಲಸ, ಕೂಲಿ ಕೆಲಸಕ್ಕೆ ಗುಳೆ ಹೋಗುತ್ತಾರೆ. ಇಲ್ಲಿಂದ ಬೆಂಗಳೂರು, ಮಂಗಳೂರು, ತಮಿಳುನಾಡು, ಗೋವಾ, ರತ್ನಗಿರಿ, ಕಾರವಾರ, ಹುಬ್ಬಳ್ಳಿ, ಬಳ್ಳಾರಿ, ಮಂಡ್ಯ, ತುಮಕೂರು ಸೇರಿದಂತೆ ಕೆಲಸ ಸಿಕ್ಕಲ್ಲಿ ಗುಳೆ ಹೊರಟಿದ್ದಾರೆ. ಇಡೀ ಗ್ರಾಮದಲ್ಲಿ ಈಗ ಕಾಣಸಿಗುವುದು ವಯಸ್ಸಾದ ಅಜ್ಜ ಅಜ್ಜಿಯರು ಇಲ್ಲವೇ ದೈಹಿಕವಾಗಿ ದುರ್ಬಲರಾಗಿರುವವರು ಮಾತ್ರ. ಕಸ್ತೂರಮ್ಮ ಎನ್ನುವ ಅಜ್ಜಿಯ ಮಕ್ಕಳೆಲ್ಲಾ ದುಡಿಯುವುದಕ್ಕೆ ಹೋಗಿದ್ದಾರೆ. ಮನೆಯಲ್ಲಿ ಅಜ್ಜ-ಅಜ್ಜಿ ಮಾತ್ರ ಇದ್ದಾರೆ. ನಡೆಯಲೂ ಆಗದ ಸ್ಥಿತಿಯಲ್ಲಿರುವ ಈ ಅಜ್ಜಿಗೆ ಕುಡಿಯುವ ನೀರು ಕೊಡಲು ಮೊಮ್ಮಗಳು ಬರಬೇಕು. ನಿಸ್ಸಾಯಕರಾಗಿರುವ ಈ ಜೀವಗಳು ಇಂದು ಕಣ್ಣೀರು ಹಾಕುತ್ತಿವೆ. ನಮ್ಮ ನೋಡಿಕೊಳ್ಳೋವ್ರು ಯಾರು ಅಂತ ವಯೋವೃದ್ಧರು ಚಿಂತೆಗಿಡಾಗಿ ತಾಂಡಾ, ಹಳ್ಳಿಗಳು ವೃದ್ಧಾಶ್ರಮಗಳಾಗ್ತಿವೆ.
ಮಹಾನಗರದತ್ತ ಕೆಲ ಕುಟುಂಬಗಳು: ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ, ಕುಷ್ಟಗಿ ತಾಲ್ಲೂಕಿನ ಹುಲಿಯಾಪೂರ ತಾಂಡಾ, ಕಳಮಳ್ಳಿ ತಾಂಡಾ, ತಾವರಗೇರಾ, ಯಲಬುರ್ಗಾ ತಾಲ್ಲೂಕಿನ ಆಸುಪಾಸಿನ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳು ಈಗಾಗಲೇ ಮಹಾನಗರಗಳ ಹಾದಿ ಹಿಡಿದು ಹೊರಟಿವೆ. ಇದಕ್ಕೆ ಜಿಲ್ಲೆಯಲ್ಲಿ ಸರಿಯಾದ ಉದ್ಯೋಗ ಸಿಗದಿರೋದು. ಉದ್ಯೋಗ ಖಾತ್ರಿ ಅಡಿ ಕೂಲಿ ಕೆಲಸ ಸಿಕ್ಕಿದರೂ ಕೂಲಿ ಹಣ ಪಡೆಯಲು ಹಲವು ಪ್ರಕ್ರಿಯೆಗಳನ್ನು ಪಾಲಿಸ ಬೇಕಾಗಿರುವುದು, ಸಿಗುವ ಹಣದಲ್ಲೂ ಮಧ್ಯವರ್ತಿಗಳಿಗೆ ಪಾಲು ಕೊಡಬೇಕಾ ಗುವುದು ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ವಲಸೆ ಹೋಗ್ತಿದ್ದಾರೆ.
ಜಾನುವಾರುಗಳ ಮಾರಾಟ: ಜಿಲ್ಲಾಡಳಿತ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾಕ್ಷೇತ್ರಕ್ಕೆ ಒಂದರಂತೆ ಐದು ಗೋಶಾಲೆಗಳನ್ನು ತೆರೆದಿದೆ. ಆದ್ರೆ ಅವು ನೆಪಕ್ಕೆ ಮಾತ್ರ ಎನ್ನುವಂತಾದ್ರೂ ಕೆಲವಡೆ ಜಾನುವಾರುಗಳ ಹಸಿವನ್ನ ನೀಗಿಸ್ತಿವೆ. ಇನ್ನು ಕೆಲವಡೆ ರೈತ್ರು ತಮ್ಮ ಜಾನುವಾರುಗಳನ್ನ ಸಾಕಲು ಸಾಧ್ಯವಾಗದೆ ಮಾರಾಟ ಮಾಡ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಗಿಣಗೇರಿಯ ಒಂದೆ ಸಂತೆವೊಂದರಲ್ಲಿ 17,143 ಜಾನುವಾರುಗಳು ಮಾರಾಟವಾಗಿವೆ ಅಂದ್ರೆ ಬರಗಾಲದ ಭೀಕರತೆಯ ಅರಿವಾಗ್ತದೆ. ಜಿಲ್ಲೆಯ ವೆಂಕಟಗಿರಿ, ಕನಕಗಿರಿ, ಅಳವಂಡಿ, ಕಲಕೇರಿ, ತಲ್ಲೂರುಗಳಲ್ಲಿ ಗೋಶಾಲೆ ಆರಂಭವಾಗಿವೆ. ಜಿಲ್ಲೆಯಲ್ಲಿ ಅಂದಾಜು ಜಾನುವಾರುಗಳು 3,39,947 ಇವೆ. ಮೇವು 3,50,071 ಮೆಟ್ರಿಕ್ ಟನ್ ನಷ್ಟಿದೆ. ಹೀಗೆ ಗೋ ಶಾಲೆಯಲ್ಲಿ ಅಗತ್ಯ ಮೇವು ನೀರು ಸಂಗ್ರಹಿಸಲಾಗಿದೆ. ಮೇವು ಬ್ಯಾಂಕ್ ಕೂಡಾ ಆರಂಭಿಸಲಾಗಿದೆ. ಇನ್ನು ಜಿಲ್ಲೆ ಹೋಬಳಿವಾರು ಗೋಶಾಲೆ ಆರಂಭಿಸಬೇಕೆನ್ನೋದು ರೈತರ ಒತ್ತಾಯವಾಗಿದೆ.
ಇನ್ನು ನರೇಗಾ ಯೋಜನೆಯಡಿ ಕೆಲವಡೆ ಜಿಲ್ಲೆಯಲ್ಲಿ ಗುಳೆ ಹೋಗುವುದನ್ನ ತಪ್ಪಿಸಲು ಉದ್ಯೋಗ ನೀಡಲಾಗ್ತಿದೆ. ಉದ್ಯೋಗ ಪಡೆದಿರೋ ಜನ್ರು ದುಡಿಯೋ ಕೈಗೆ ಕೆಲ್ಸ ಸಿಕ್ತು ಅಂತಾ ಕೆಲ್ಸ ಮಾಡ್ತಿದ್ದಾರೆ. ಉದ್ಯೋಗ ಖಾತ್ರಿಯೋಜನೆಯನ್ನು ಜಿಲ್ಲೆಯಲ್ಲಿ ಗುಳೆ ಹೋಗ್ತಿರೋ ಗ್ರಾಮಗಳಲ್ಲಿ ಆರಂಭಿಸೋವತ್ತ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ.
ಬರಡಾದ ಹಿರೇಹಳ್ಳ ಡ್ಯಾಂ: ಕೊಪ್ಪಳ ಜಿಲ್ಲೆಯ ಒಟ್ಟು 739 ಜನ ವಸತಿ ಗ್ರಾಮಗಳಲ್ಲಿ 232 ಗ್ರಾಮಗಳು ಭೀಕರವಾದ ಕುಡಿಯೋ ನೀರಿನ ಸಮಸ್ಯೆಯನ್ನ ಎದುರಿಸ್ತಿವೆ. ಸಿಂಗಟಾಲೂರು, ಕೃಷ್ಣ ಬಿ ಸ್ಕಿಂ ಎಂದು ಹೇಳುವುದೇ ಆಯಿತೇ ಹೊರತು ಅದರಿಂದ ಜನಸಾಮಾನ್ಯರ ಭವಣೆ ತಪ್ಪುವ ಲಕ್ಷಣಗಳೇ ಕಾಣುತ್ತಿಲ್ಲ. ಹಿರೇಹಳ್ಳ ಡ್ಯಾಂ ಬತ್ತಿಬರಡಾಗಿದೆ. ಈ ಭಾಗದ ಹಳ್ಳಿಗಳಿಗೆ ಪೂರೈಕೆ ಆಗ್ತಿದ್ದ ನೀರು ಸ್ತಗಿತವಾಗಿದೆ. ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದೆ. ಕೊಪ್ಪಳ ಜಿಲ್ಲೆಯಲ್ಲಿನ ಪ್ರಮುಖ ಕೆರೆಗಳು ಬತ್ತಿ ಬರಡಾಗಿವೆ. ಕುಷ್ಟಗಿ ತಾಲೂಕಿನ ಗಡಿಹಳ್ಳಿಗಳಲ್ಲಿ ನೀರಿನ ಬವಣೆ ಹೇಳತೀರದಾಗಿದೆ. ಕೆಲವಡೆ ಕೆರೆ ತುಂಬಿಸೋ ಕಾರ್ಯವಾದ್ರೆ ಆ ನೀರು ಖಾಲಿಯಾಗಿವೆ. ಆದ್ರೆ ಕೈಕೊಟ್ಟ ಮಳೆ ಎಲ್ಲ ಯೋಜನೆಗಳನ್ನು ಉಲ್ಟಾ ಮಾಡಿದೆ. ಜಿಲ್ಲೆಯಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗೋದು ಅಂತ ಜಿಲ್ಲಾಡಳಿತ ಹೇಳ್ತಿದೆ.
ಶುದ್ಧ ಕುಡಿಯೋ ಘಟಕಗಳು ಮಂಜೂರಾದಷ್ಟು ಪೂರ್ಣಗೊಂಡಿಲ್ಲ. ಇದು ಸಹ ಜನ ನೀರಿಗಾಗಿ ಹಾಹಾಕಾರ ಪಡುವಂತೆ ಮಾಡಿದೆ. ಸೂಚಿಸುತ್ತದೆ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ತಾಲೂಕಿನ ಗ್ರಾಮಗಳಲ್ಲಿ ಫ್ಲೋರೈಡ್ ನೀರೆಗತಿ. ಕುಷ್ಟಗಿ ತಾಲೂಕಿನಲ್ಲಿ ನೀರಿಗಾಗಿ ಮೈಲುದೂರು ಹೋಗಿ ತರುವಂತಾಗಿದೆ. ಇಲ್ಲಿವ್ರಗೂ ಜಿಲ್ಲಾಡಳಿತ ಕುಡಿಯೋ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇನ್ಮೇಲಾದ್ರೂ ಜಿಲ್ಲಾಡಳಿತ ಬರವನ್ನ ಗಂಭೀರವಾಗಿ ಪರಿಗಣಿಸಿ ಬರ ಎದುರಿಸಬೇಕಿದೆ.