ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಪಾಲಾಗಿದ್ದ ಡ್ರೋನ್ ಪ್ರತಾಪ್ ಮತ್ತೆ ಬಿಗ್ ಬಾಸ್ (Bigg Boss Kannada) ಮನೆಗೆ ವಾಪಸ್ಸಾಗಿದ್ದಾರೆ. ಆಸ್ಪತ್ರೆಯಿಂದ ಹೋದ ನಂತರ ಅವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಪ್ರತಾಪ್ (Drone Pratap) ಅವರಿಗೆ ಏನಾಗಿದೆ? ಸರಿಯಾದ ಮಾಹಿತಿ ಕೊಡಿ, ಅವರನ್ನು ಬಿಗ್ ಬಾಸ್ ಮನೆಯಲ್ಲಿ ತೋರಿಸಿ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಲಾಗಿತ್ತು. ಕೊನೆಗೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿರುವ ವಿಡಿಯೋವನ್ನು ವಾಹಿನಿ ರಿಲೀಸ್ ಮಾಡಿದೆ.
ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸಂಚಲವನ್ನುಂಟು ಮಾಡಿತ್ತು. ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಸಹಜವಾಗಿಯೇ ಅವರ ಕುಟುಂಬ ಮತ್ತು ಆಪ್ತರು ಆತಂಕಕ್ಕೆ ಒಳಗಾಗಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಈ ನ್ಯೂಸ್ ಬರ್ತಿದ್ದಂತೆ ಆಸ್ಪತ್ರೆಯತ್ತ ಪೊಲೀಸರು ಕೂಡ ಧಾವಿಸಿದ್ದರು. ಪೊಲೀಸರು ಆಸ್ಪತ್ರೆಗೆ ಹೋಗುವಷ್ಟರಲ್ಲಿ, ಡ್ರೋನ್ ಪ್ರತಾಪ್ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲಾಗಿತ್ತು. ಹಾಗಾಗಿ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು.
ಡ್ರೋನ್ ಪ್ರತಾಪ್ ಆಸ್ಪತ್ರೆಯಲ್ಲಿ ಇಲ್ಲ ಎಂದು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆಯೇ, ಪೊಲೀಸ್ ಜೀಪ್ ಬಿಗ್ ಬಾಸ್ ಮನೆಗೆ ನುಗ್ಗಿತ್ತು. ಡ್ರೋನ್ ಪ್ರತಾಪ್ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಕೇಳಿತ್ತು. ವೈದ್ಯರಿಂದ ಮಾಹಿತಿಯನ್ನೂ ಪಡೆದಿತ್ತು. ಅವರಿಗೆ ಆಹಾರದಲ್ಲಿ ವ್ಯತ್ಯಾಸವಾದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಾಗಿದೆ ಎನ್ನುವ ಮಾಹಿತಿಯನ್ನೂ ಪಡೆದಿತ್ತು. ಆದರೆ, ಡ್ರೋನ್ ಅಭಿಮಾನಿಗಳು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರನ್ನು ನೋಡಬೇಕು ಎಂದು ಆಗ್ರಹಿಸಿದ್ದರು.
ಆಸ್ಪತ್ರೆಯಿಂದ ಡ್ರೋನ್ ಡಿಸ್ಚಾರ್ಜ್ ಆದ ಮೇಲೆ ಬಿಗ್ ಬಾಸ್ ಮನೆಯಲ್ಲೇ ಅವರಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ವಿಶ್ರಾಂತಿ ಪಡೆದುಕೊಂಡು ಡ್ರೋನ್, ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಂತೆಯೇ ಡ್ರೋನ್ ನನ್ನು ತಬ್ಬಿಕೊಂಡು ನಮ್ರತಾ (Namrata) ಸ್ವಾಗತಿಸಿದ್ದಾರೆ. ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಎಂದು ಸಂಗೀತಾ ಭಾವುಕರಾಗಿದ್ದಾರೆ. ಡ್ರೋನ್ ಆರೋಗ್ಯವಾಗಿರಲಿ ಎಂದು ದೊಡ್ಮನೆಯಲ್ಲಿ ಪೂಜೆ ಕೂಡ ಮಾಡಲಾಗಿದೆ. ಇಂದು ಕಿಚ್ಚನ ಪಂಚಾಯತಿಯಲ್ಲಿ ಡ್ರೋನ್ ಗೆ ಸುದೀಪ್ ಏನ್ ಹೇಳ್ತಾರೆ ಎಂದು ಕಾದು ನೋಡಬೇಕಿದೆ.