ಬೆಂಗಳೂರು: ಓಎಲ್‍ಎಕ್ಸ್ ಆ್ಯಪ್ ಮುಖಾಂತರ ಕಾರು ಮಾರಾಟಕ್ಕಿಟ್ಟು ಗ್ರಾಹಕರನ್ನು ಭೇಟಿಯಾಗಲು ಹೊರಟ ಟೆಕ್ಕಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ 23 ದಿನಗಳ ಕಳೆದಿದ್ದು, ಪೊಲೀಸರು ಟೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ಡಿಸೆಂಬರ್ 18 ರಂದು ಕುಮಾರ್ ಅಜಿತಾಬ್(30) ಎಂಬ ಟೆಕ್ಕಿ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿದ್ದರು. ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿರುವ ಪೊಲೀಸರು ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಜಿತಾಬ್ ಮೂಲತಃ ಬಿಹಾರದವರಾಗಿದ್ದು, ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಬ್ರಿಟೀಷ್ ಟೆಲಿಕಾಂ ಕಂಪನಿಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡಿಕೊಂಡು ವೈಟ್ ಫೀಲ್ಡ್ ನ ಅಪಾರ್ಟ್ ಮೆಂಟ್‍ವೊಂದರಲ್ಲಿ ಸ್ನೇಹಿತರ ಜೊತೆ ನೆಲೆಸಿದ್ದರು. ತನ್ನ ಬಳಿಯಿದ್ದ ಸಿಯಾಜ್ ಕಾರನ್ನು ಮಾರಲು ಒಎಲ್‍ಎಕ್ಸ್ ನಲ್ಲಿ ಪ್ರಕಟಿಸಿದ್ದರು. ಕಾರನ್ನು ಬೇರೆಯವರಿಗೆ ತೋರಿಸಲೆಂದು ಡಿಸೆಂಬರ್ 18ರಂದು ತನ್ನ ಫ್ಲಾಟ್ ನಿಂದ ಹೊರಟವರು ಮತ್ತೆ ವಾಪಸ್ಸಾಗದೆ ಕಣ್ಮರೆಯಾಗಿದ್ದಾರೆ.
ಅಜಿತಾಬ್ ಕಾರನ್ನು ಕೊಳ್ಳುವವರು ಆತನಿಗೆ ಕರೆ ಮಾಡಿದ್ದರಿಂದ ಅಂದು ತನ್ನ ಕೆಎ03 ಓಚಿ1751 ಕಾರಿನಲ್ಲಿ ಮನೆಯಿಂದ ಹೊರಹೋಗಿದ್ದರು. ಆದ್ರೆ ಅಜಿತಾಬ್ ಮನೆಗೆ ವಾಪಸ್ಸಾಗದ ಕಾರಣ ಎಲ್ಲೆಡೆ ಹುಡುಕಾಟ ನಡೆಸಿದ ಕುಟುಂಬದವರು ಈ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಜಿತಾಬ್ ಗಾಗಿ ಕರ್ನಾಟಕ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದು ಯಾವುದೇ ಪ್ರಯೋಜನವಾಗಿಲ್ಲ.
ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ. 8 ತಂಡಗಳನ್ನು ರಚಿಸಿಕೊಂಡಿದ್ದು ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ದೂರವಾಣಿ ಮೂಲಕ ತಿಳಿಸಿದ್ದಾರೆ.
ಒಟ್ಟಾರೆ ಅಜಿತಾಬ್ ರನ್ನು ಕಾರು ಕೊಳ್ಳುವ ನೆಪದಲ್ಲಿ ಯಾರಾದರು ಕರೆಸಿಕೊಂಡು ಕಿಡ್ನಾಪ್ ಮಾಡಿದ್ದಾರೋ? ಇಲ್ಲವೇ ಬೇರೆ ಯಾವುದೇ ಕಾರಣದಿಂದ ಕಣ್ಮರೆಯಾಗಿದ್ದಾರೋ ಎಂಬ ಅನುಮಾನಗಳು ಕಾಡತೊಡಗಿದೆ. ತಮ್ಮ ಮಗ ಮನೆಗೆ ವಾಪಸ್ಸಾಗುವ ನಿರೀಕ್ಷೆಯಲ್ಲಿ ಅಜಿತಾಬ್ ತಂದೆ ಜೀವಿಸುತ್ತಿದ್ದು, ಪೊಲೀಸರ ಕಾರ್ಯಾಚರಣೆ ಯಾವ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.