ಮಡಿಕೇರಿ/ಮಂಗಳೂರು: ಕೇರಳಕ್ಕೆ ಮುಂಗಾರು ಎಂಟ್ರಿ ಕೊಟ್ಟ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದ ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲಿ ತುಂತುರು ಮಳೆ ಆರಂಭವಾಗಿದೆ.
ಕೊಡಗಿನಲ್ಲಿ ಇಂದು ಮುಂಜಾನೆಯಿಂದ ತುಂತುರು ಮಳೆ ಆರಂಭವಾಗಿದ್ದು, ಭೂಮಿಯ ತಾಪಕ್ಕೆ ಮಳೆರಾಯ ತಂಪರೆದಿದ್ದಾನೆ. ಮಳೆ ಆರಂಭಗೊಂಡ ಬೆನ್ನಲ್ಲೇ ಜನರು ಆತಂಕಗೊಂಡಿದ್ದಾರೆ. ಕಳೆದ ಬಾರಿ ಜಲ ಪ್ರಳಯಕ್ಕೆ ಜನರು ಬದುಕು ಮೂರಬಟ್ಟೆಯಾಗಿತ್ತು. ಭೂ ಕುಸಿತದಿಂದ ಅಪಾರ ಪ್ರಮಾಣದ ಆಸ್ತಿ ನಾಶವಾಗಿತ್ತು. ಸದ್ಯ ಜಿಲ್ಲೆಗೆ ಕಳೆದ ವರ್ಷಕ್ಕಿಂತ ಈ ವರ್ಷ ಮುಂಗಾರು ವಿಳಂಬವಾಗಿದೆ.
ಇತ್ತ ದಕ್ಷಿಣ ಕನ್ನಡದಲ್ಲೂ ಮುಂಗಾರಿನ ಮುನ್ಸೂಚನೆ ಸಿಕ್ಕಿದೆ. ಹನಿ ಹನಿ ಮಳೆಯ ಸಿಂಚನಕ್ಕೆ ಜನ ರೋಮಾಂಚನಗೊಂಡಿದ್ದಾರೆ. ಬಿಸಿಲ ಬೇಗೆಯಲ್ಲಿ ಕಾದ ಇಳೆಗೆ ಮಳೆರಾಯನ ತಂಪಿನ ಕಂಪನ ಸಿಕ್ಕಿದೆ. ಹವಾಮಾನ ಇಲಾಖೆ ಜೂನ್ 10ಕ್ಕೆ ಮುಂಗಾರಿನ ಸೂಚನೆ ನೀಡಿತ್ತು. ಅಲ್ಲದೆ ಮುಂಗಾರು ಎರಡು ದಿನಗಳ ಹಿಂದೆ ಕೇರಳಕ್ಕೆ ಕಾಲಿಟ್ಟಿತ್ತು. ಕರಾವಳಿ ಜನ ಬೇಸಿಗೆಯಲ್ಲಿ ಮಳೆ ಇಲ್ಲದೆ ನೀರಿಗಾಗಿ ಪರದಾಡಿದ್ದರು. ಈಗ ಮಳೆ ಶುರುವಾಗಿದ್ದು ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.