ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಸೋಮವಾರ ಸಂಜೆ 7 ಗಂಟೆ ಸುಮಾರಿನಿಂದ ಮಂಗಳೂರಿನ ನೇತ್ರಾವತಿ ದಡದಿಂದ ನಾಪತ್ತೆಯಾಗಿದ್ದಾರೆ. ಆದರೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೀಗ ಸಿದ್ಧಾರ್ಥ್ ಕಾರು ಚಾಲಕ ನಾಪತ್ತೆಯಾಗುವ ಕೊನೆಯ ಕ್ಷಣದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಡ್ರೈವರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಿದ್ಧಾರ್ಥ್ ಅವರು ನಾಪತ್ತೆಯಾಗುವ ಮೊದಲು ಎಲ್ಲಿಗೆ ಹೋಗಿದ್ದರು, ಏನು ಮಾಡಿದರು ಎಂಬ ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.
ಡ್ರೈವರ್ ಹೇಳಿದ್ದೇನು?
ನಾನು ಕಳೆದು ಮೂರು ವರ್ಷಗಳಿಂದ ಕಾಫಿ ಡೇ ಮಾಲೀಕರಾದ ಸಿದ್ಧಾರ್ಥ್ ಅವರು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೋಮವಾರ ಎಂದಿನಿಂದ ಸದಾಶಿವನಗರದಲ್ಲಿರುವ ಸಿದ್ಧಾರ್ಥ್ ಅವರ ಮನೆಗೆ ಕೆಲಸಕ್ಕೆ ಹೋಗಿದ್ದೆ. ನಂತರ ಸುಮಾರು 8 ಗಂಟೆಗೆ ಸಿದ್ಧಾರ್ಥ್ ಅವರು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಅವರ ಕಚೇರಿಗೆ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋದೆ. ನಂತರ ಕಚೇರಿಯಲ್ಲಿದ್ದು, ಬೆಳಗ್ಗೆ 11 ಗಂಟೆ ವಾಪಸ್ ಮನೆಗೆ ಬಂದೆವು ಎಂದು ತಿಳಿಸಿದ್ದಾರೆ.
ಮನೆಗೆ ಬಂದ ನಂತರ ಸಿದ್ಧಾರ್ಥ್ ಅವರು ಊರಿಗೆ ಹೋಗಬೇಕಾಗಿದೆ ನೀನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ ಎಂದು ಹೇಳಿದರು. ನಾನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಂದೆ. ಬಳಿಕ ಸುಮಾರು 5.30ಕ್ಕೆ ಸಕಲೇಶಪುರದ ಕಡೆಗೆ ಹೋಗು ಎಂದರು. ನಾನು ಅವರು ಹೇಳಿದಂತೆ ಕೆಎ 03 ಎನ್‍ಸಿ, 2592 ಕಾರಿನಲ್ಲಿ ಬೆಂಗಳೂರನ್ನು ಬಿಟ್ಟು ಸಕಲೇಶಪುರದ ಕಡೆ ಚಲಾಯಿಸಿಕೊಂಡು ಹೋದೆ. ಸಕಲೇಶಪುರ ಸಮೀಪಿಸುತ್ತಿದಂತೆ ಮುಂದೆ ಮಂಗಳೂರು ಕಡೆ ಹೋಗುವಾ ಎಂದು ತಿಳಿಸಿದರು. ನಾನು ಅವರು ತಿಳಿಸಿದಂತೆ ಅವರನ್ನು ಕರೆದುಕೊಂಡು ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್ ಗೆ ಬಂದಾಗ ಸಿದ್ಧಾರ್ಥ್ ಎಡಗಡೆ ತೆಗೆದುಕೋ ಸೈಟ್‍ಗೆ ಹೋಗಬೇಕು ಎಂದು ಹೇಳಿದರು.
ಅವರು ಹೇಳಿದಂತೆ ನಾನು ಎಡಗಡೆಗೆ ತೆಗೆದುಕೊಂಡು ಕೇರಳ ಹೆದ್ದಾರಿಯಲ್ಲಿ 3-4 ಕಿ.ಮೀ ಬಂದಾಗ ನದಿಗೆ ಅಡ್ಡಲಾಗಿ ಕಟ್ಟಿರುವ ಒಂದು ದೊಡ್ಡ ಸೇತುವೆ ಆರಂಭವಾಗುತ್ತಿದ್ದಂತೆ ಕಾರು ನಿಲ್ಲಿಸು ಎಂದು ಹೇಳಿದರು. ನಂತರ ಅವರು ಕಾರಿನಿಂದ ಇಳಿದು ವಾಕಿಂಗ್ ಹೋದರು. ಹೀಗೆ ಇಳಿದು ಫೋನಿನಲ್ಲಿ ಮಾತನಾಡಿಕೊಂಡು ಸ್ವಲ್ಪ ದೂರ ಹೋದವರೇ ಮತ್ತೆ ವಾಪಸ್ ಕಾರು ಬಳಿ ಬಂದರು. ನಂತರ ಪುನಃ ಫೋನಿನಲ್ಲಿ ಮಾತನಾಡಿಕೊಂಡು ಒಂದಷ್ಟು ದೂರ ಹೋದರು. ಹೋಗೆ ಹೋಗುವಾಗ ಅವರನ್ನು ನಾನು ನೋಡುತ್ತಿದ್ದೆ, ಅವರು ಕಾಣಿಸದಾಗ ನಾನು ಅವರನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋದೆ .
ಆಗ ಅವರು `ನೀನು ಇಲ್ಲೇ ಇರು ಬರಬೇಡ’ ಎಂದು ಹೇಳಿ ಹೋದರು. ಸುಮಾರು ಅರ್ಧ ಗಂಟೆಯಾದರೂ ಅವರು ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ನಾನು ಅವರಿಗೆ ಫೋನ್ ಮಾಡಿದೆ. ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ನಾನು ಮತ್ತಷ್ಟು ಆತಂಕಗೊಂಡಿದ್ದು, ನಾನು ಎಸ್.ಎಂ ಕೃಷ್ಣ ಅವರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.