ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಚಾಲಕನಿಗೆ ಥಳಿತ, ಆಟೋ ಜಖಂ

Public TV
1 Min Read
SHIVAMOGGA AUTO

– ರಕ್ಷಣೆ ಕೇಳಿ ಈಶ್ವರಪ್ಪ ಕಾಲಿಗೆ ಬಿದ್ದ ಹರೀಶ್

ಶಿವಮೊಗ್ಗ: ಬಿಜೆಪಿಗೆ ವೋಟ್ ಹಾಕಿದೆ ಎಂದು ಹೇಳಿದ್ದಕ್ಕೆ ಆಟೋ ಚಾಲಕನೊಬ್ಬನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ (Shivamogga) ದ ಸೋಮಿನಕೊಪ್ಪ ಬಡಾವಣೆಯಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

ಆಟೋ ಚಾಲಕ ಹರೀಶ್ ರಾವ್ (Auto Driver Harish Rao) ಎಂಬಾತ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಯಾರಿಗೆ ವೋಟ್ ಹಾಕಿದೆ ಎಂದು ದುಷ್ಕರ್ಮಿಗಳು ಹರೀಶ್‍ನನ್ನು ಕೇಳಿದ್ದಾರೆ. ಈ ವೇಳೆ ಆತ ಬಿಜೆಪಿಗೆ ಎಂದಿದ್ದಾನೆ. ಇದೇ ಕಾರಣಕ್ಕೆ ಹರೀಶ್‍ಗೆ ಹಿಗ್ಗಾಮುಗ್ ಥಳಿಸಿದ ದುಷ್ಕರ್ಮಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಅಲ್ಲದೆ ರಾಡ್ ನಿಂದ ಆಟೋ ಗಾಜು ಜಖಂಗೊಳಿಸಿ, ಮೇಲ್ಭಾಗದ ಶೀಟ್ ಅನ್ನು ಹರಿದು ಹಾಕಿದ್ದಾರೆ.

SHIVAMOGGA ESHWARAPPA 1

ಸೋಮಿನಕೊಪ್ಪ ನಿವಾಸಿಗಳಾಗಿರುವ ಡಬ್ಬ ಅಲಿಯಾಸ್ ನಜ್ರು, ಇಡ್ಲಿ ಅಲಿಯಾಸ್ ಅಬ್ರಾರ್ ಹಾಗೂ ಮತ್ತೊಬ್ಬ ಯುವಕ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಹರೀಶ್ ರಾವ್ ಆರೋಪಿಸಿದ್ದಾರೆ. ಎಸ್.ಪಿ. ಕಚೇರಿಗೆ ಆಟೋ ಚಾಲಕ ಹರೀಶ್ ರಾವ್ ಕಣ್ಣೀರಿಡುತ್ತಾ ಆಗಮಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಹಿಂಸಾ ಗ್ಯಾರಂಟಿ ಸ್ಕೀಮ್ ಸಹಿಸುವುದಿಲ್ಲ: ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

ದೂರು ನೀಡಲು ಬಂದ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (K S Eshwarappa) ಕೂಡ ಎಸ್ ಪಿ ಕಚೇರಿಯಲ್ಲಿ ಎದುರಾಗಿದ್ದು, ಈ ವೇಳೆ ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆ ನೀಡುವಂತೆ ಕೋರಿದ್ದಾರೆ. ತಕ್ಷಣವೇ ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಮಾತನಾಡಿ, ಆಟೋ ಚಾಲಕನಿಗೆ ರಕ್ಷಣೆ ನೀಡುವಂತೆ ಹಾಗೂ ಹಲ್ಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪರಿಹಾರವಾಗಿ 20 ಸಾವಿರ ರೂ. ಹಣವನ್ನು ನೀಡಿದ್ದಾರೆ.

Share This Article