– ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ
ಬೆಂಗಳೂರು: 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಬಾರಿ ಕೃಷಿ ಕ್ಷೇತ್ರಕ್ಕೂ ಬಂಪರ್ ಕೊಡುಗೆಗಳನ್ನ ಘೋಷಣೆ ಮಾಡಿದ್ದಾರೆ.
ಹನಿ ಮತ್ತು ತುಂತುರು ನೀರಾವರಿ (Drip and sprinkler irrigation) ಘಟಕ ಅಳವಡಿಕೆಗೆ ಕೃಷಿ ಇಲಾಖೆಯಿಂದ ಒಟ್ಟು 1.81 ಲಕ್ಷ ರೈತರಿಗೆ 440 ಕೋಟಿ ರೂ. ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಹೊಸ ಘೋಷಣೆಗಳೇನು?
* ರೈತ ಸಮೃದ್ಧಿ ಯೋಜನೆಯಡಿ 10 ಕೃಷಿ ಹವಾಮಾನ ವಲಯಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳ ಅಭಿವೃದ್ಧಿ ಮಾಡಲಾಗುವುದು.
* ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 428 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ರೈತರಿಗೆ ಸಹಾಯಧನ ಸೌಲಭ್ಯ ಕಲ್ಪಿಸುವುದು.
* ತೊಗರಿ ಉತ್ಪಾದನೆ ಉತ್ತೇಜನಕ್ಕೆ 88 ಕೋಟಿ ರೂ. ಒದಗಿಸಲಾಗುವುದು.
* ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಲಾಗುವುದು.
* ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ ಗುರಿ ಹೊಂದಲಾಗಿದೆ.
* ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ ಸ್ಥಾಪಿಸಲಾಗುವುದು.
* ಕೃಷಿ ಹವಾಮಾನ ವಲಯಗಳ ವರ್ಗೀಕರಣವನ್ನು ಮರುವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿ ರಚನೆ ಮಾಡಲಾಗುವುದು.
* ರೈತರ ಜೀವನೋಪಾಯ ಸುಧಾರಣೆಗೆ ಸಮಗ್ರ ಮಳೆಯಾಶ್ರಿತ ಕೃಷಿ ನೀತಿ ಜಾರಿ.
* ಕೃಷಿ ಇಲಾಖೆಯ 58 ಪ್ರಯೋಗಾಲಯಗಳ ಬಲವರ್ಧನೆ.
* 20 ಕೋಟಿ ರೂ. ವೆಚ್ಚದಲ್ಲಿ ಸಾವಯವ ಮತ್ತು ಸಿರಿಧಾನ್ಯ ಹಬ್‌ಗಳ ಸ್ಥಾಪನೆ ಮಾಡುವುದರ ಜೊತೆಗೆ ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕಾಗಿ ಪರಿವರ್ತಿಸಲು ಕ್ರಮ.
* ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮೂಲಸೌಕರ್ಯ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಮೀಸಲಿಡಲಾಗುವುದು
* ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್ ಸೌಲಭ್ಯ ಕಲ್ಪಿಸಲಾಗುವುದು
* ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು
* ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪಿಸುವ ಕುರಿತು ಕಾರ್ಯಸಾಧ್ಯತ ವರದಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದರು.