ಬೆಂಗಳೂರು: ಕುಡಿಯುವ ನೀರಿನ ಅನಗತ್ಯ ಪೋಲು ಮಾಡುವುದರ ವಿರುದ್ಧ ಬೆಂಗಳೂರು ಜಲಮಂಡಳಿಯ ದಂಡ ಅಭಿಯಾನ ಚುರುಕುಗೊಂಡಿದೆ. ಕಳೆದ ಒಂದು ವಾರದಲ್ಲಿ 112 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡಿದವರಿಂದ 5.60 ಲಕ್ಷ ರೂ. ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂಬರುವ ಬೇಸಿಗೆಯಲ್ಲಿ ಎಲ್ಲರಿಗೂ ಶುದ್ದ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವ ನಿಟ್ಟಿನಲ್ಲಿ ಫೆ.17 ರಂದು, ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡದಂತೆ ಜಲಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿತವಾಗಿದ್ದು, ಮುಂದಿನ ಬೇಸಿಗೆಯಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಅಭಾವ ಎದುರಾಗಬಹುದು ಎಂದು ಐಐಎಸ್‌ಸಿ ವಿಜ್ಞಾನಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈಗಿನಿಂದಲೇ ಸಾರ್ವಜನಿಕರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸಬೇಕು. ಅನಗತ್ಯವಾಗಿ ನೀರು ಪೋಲು ಮಾಡುವುದನ್ನು ತಡೆಯುವುದು ಈ ಆದೇಶದ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
Advertisement
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ – 1964 ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು, ವಾಹನಗಳ ಸ್ವಚ್ಚತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲ್‌ಗಳಲ್ಲಿ ಇನ್ನಿತರೆ ಕಾರ್ಯಕ್ಕೆ ಬಳಸುವಂತಿಲ್ಲ. ರಸ್ತೆ ನಿರ್ಮಾಣ ಹಾಗೂ ಸ್ವಚ್ಛತೆಗೆ ಶುದ್ದ ಕುಡಿಯುವ ನೀರಿನ ಬಳಕೆ ಮಾಡುವುದನ್ನು ನಿಷೇಧಿಸಲಾಗಿತ್ತು ಎಂದಿದ್ದಾರೆ.
Advertisement
ಸಾರ್ವಜನಿಕರು ಮುಂಬರುವ ನೀರಿನ ಕೊರತೆಯನ್ನು ಕಡೆಗಣಿಸಿ, ನಿಷೇಧಿಸಿರುವಂತಹ ಕಾರ್ಯಗಳಿಗೆ ಶುದ್ದ ನೀರಿನ ಬಳಕೆಯನ್ನು ಇನ್ನೂ ಮುಂದುವರೆಸಿರುವುದು ಸರಿಯಲ್ಲ. ಕಳೆದ 7 ದಿನಗಳಲ್ಲಿ ನಮ್ಮ ಮಂಡಳಿ ಸಿಬ್ಬಂದಿ ಕುಡಿಯುವ ನೀರನ್ನು ಪೋಲು ಮಾಡಿದವರ ವಿರುದ್ದ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿದ ದಂಡ ವಸೂಲಿ ಮಾಡಲು ಮುಂದಾಗಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
Advertisement
ದಕ್ಷಿಣ ವಲಯದಲ್ಲಿ ಹೆಚ್ಚು ಪ್ರಕರಣಗಳು:
ಫೆ.23 ರ ವರೆಗೆ ಒಟ್ಟಾರೆಯಾಗಿ 112 ಪ್ರಕರಣಗಳನ್ನು ದಾಖಲಿಸಲಾಗಿದೆ. ದಕ್ಷಿಣ ವಲಯದಲ್ಲಿ ಹೆಚ್ಚು ಪ್ರಕರಣಗಳು (33) ದಾಖಲಾಗಿವೆ. ಉತ್ತರ ವಲಯದಲ್ಲಿ 23, ಪಶ್ಚಿಮ ವಲಯದಲ್ಲಿ 28, ಪೂರ್ವ ವಲಯದಲ್ಲಿ 28 ಪ್ರಕರಣಗಳು ದಾಖಲಾಗಿವೆ.
Advertisement
ಬೆಂಗಳೂರು ನಗರಕ್ಕೆ ಸುಮಾರು 100 ಕಿ.ಮೀ. ದೂರದಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಹೆಚ್ಚಾಗಬಹುದು ಎನ್ನುವ ಎಚ್ಚರಿಕೆಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಅಮೂಲ್ಯ ಶುದ್ದ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವುದನ್ನು ನಿಲ್ಲಿಸಬೇಕು. ಈ ಮೂಲಕ ಅಗತ್ಯವಿರುವ ಜನರಿಗೆ ಹಾಗೂ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಮಂಡಳಿಯ ಜೊತೆ ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ದಂಡ ಅಭಿಯಾನವನ್ನು ಇನ್ನಷ್ಟು ವ್ಯಾಪಕಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.