ಬೆಂಗಳೂರು: ಕುಡಿಯುವ ನೀರಿಗೆ (Drinking Water) ಕಲುಷಿತ ನೀರು ಬೆರೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ಸೇರಿದಂತೆ ಎಲ್ಲೆಡೆ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ವೈಯಾಲಿಕಾವಲ್‌ನ ಐಪಿಪಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳ ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿಗಳು ನಿನ್ನೆ ನಗರ ಪ್ರದಕ್ಷಿಣೆ ಮಾಡಿ ವಿವಿಧ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಶೀಘ್ರದಲ್ಲೇ ಕಾರ್ಯಪಡೆ ರಚನೆಗೆ ಸೂಚನೆ ನೀಡಿದ್ದು, ಎಲ್ಲೆಲ್ಲಿ ಯಾವ ಕಾರ್ಯಗಳು ಸಾಗಬೇಕು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕೆಲವು ಕಡೆ ಕುಡಿಯುವ ನೀರು ಕಲುಷಿತವಾಗಿ (Contaminated Water) ಕಾಲರಾ ಸಂಭವಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಹೀಗಾಗಿ ಬೆಂಗಳೂರಿನ ಎಲ್ಲೆಡೆ ಕುಡಿಯುವ ನೀರಿನ ಪರಿಶೀಲನೆ ನಡೆಸಲು ವ್ಯವಸ್ಥೆ ಮಾಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಮೈಸೂರು: ಕಲುಷಿತ ನೀರು ಸೇವಿಸಿ ಯುವಕ ಸಾವು – 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Advertisement
Advertisement
ಬೆಂಗಳೂರು ಹಾಗೂ ಬೇರೆ ಭಾಗಗಳಲ್ಲಿ ಜನರಿಗೆ ಕುಡಿಯಲು ಗುಣಮಟ್ಟದ ನೀರು ನೀಡಬೇಕು ಎಂದು ಅಧಿಕಾರಿಗಳಿಗೆ ಮುಂಜಾಗ್ರತೆಯಿಂದ ಎಚ್ಚರಿಕೆ ನೀಡಿದ್ದೇವೆ. ಬೆಂಗಳೂರಿನಲ್ಲಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಲು ಮಾರ್ಗದರ್ಶನ ನೀಡಲಾಗಿದೆ. ಮಳೆ ಆರಂಭಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದರು.
Advertisement
ಒತ್ತುವರಿ ತೆರವು ವಿಚಾರವಾಗಿ ಬಿಎಂಟಿಎಫ್ ಅವರ ಸಹಾಯ ಪಡೆಯುತ್ತೀರಾ ಎಂದು ಕೇಳಿದಾಗ, ಬಿಎಂಟಿಎಫ್ ಜೊತೆ ಚರ್ಚೆ ನಡೆಸಲಾಗಿದೆ. ಎಲ್ಲೆಲ್ಲಿ ಬಾಕಿ ಇದೆ ಅವುಗಳನ್ನು ತೆರವುಗೊಳಿಸಲು ಸಿಎಂ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಸಾವು ಪ್ರಕರಣ- ಮೈಸೂರು ಡಿಸಿಗೆ ಸಿಎಂ ದೂರವಾಣಿ ಕರೆ
Advertisement
ರಾಜಕಾಲುವೆ, ಕೆರೆ ಒತ್ತುವರಿದಾರರು ತಡೆಯಾಜ್ಞೆ ತರುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕೆರೆ, ಸರ್ಕಾರಿ ಉದ್ಯಾನ ಜಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಇದು ನಮ್ಮ ಗಮನದಲ್ಲಿದ್ದು, ಈ ವಿಚಾರದಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅದಕ್ಕೆ ಕಾನೂನು ಅವಕಾಶಗಳನ್ನು ಕಂಡುಕೊಳ್ಳುತ್ತೇವೆ ಎಂದರು.