Connect with us

Haveri

ಕೆರೆ ತುಂಬಿದ್ರೂ ಹಾವೇರಿ ಜನರಿಗೆ ಗಗನ ಕುಸುಮವಾದ ಕುಡಿಯುವ ನೀರು

Published

on

– ನೀರು ಕಾಣದೇ ತುಕ್ಕು ಹಿಡಿದ ನಲ್ಲಿಗಳು

ಹಾವೇರಿ: ಕೆರೆ ಭರ್ತಿಯಾಗಿ ದಿನಗಳೇ ಕಳೆದ್ರೂ ಹಾವೇರಿ ಜನತೆಗೆ ಕುಡಿಯುವ ನೀರು ಗಗನ ಕುಸುಮವಾಗಿದೆ. ಹದಿನೈದು ದಿನಗಳಿಗೊಮ್ಮೆ ಬರುವ ನೀರಿಗಾಗಿ ಜನರು ಕಾಯುತ್ತಿರುವ ದೃಶ್ಯಗಳು ಹಾವೇರಿಯಲ್ಲಿ ಕಾಣಸಿಗುತ್ತವೆ.

ಹಾವೇರಿ ನಗರದ ಹೊರವಲಯದಲ್ಲಿ ವಿಶಾಲವಾದ ಕೆರೆ ಇದೆ. ಈ ಕೆರೆ ತುಂಬಿದರೆ ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಕುಡಿಯೋಕೆ ಭರಪೂರ ನೀರು ಸಿಗಲಿದೆ. ಅಲ್ಲದೇ ಹಾವೇರಿ ನಗರಕ್ಕೆ ಇದೇ ಕೆರೆ ತುಂಬಿಸಿ ದಿನದ ಇಪ್ಪತ್ತು ನಾಲ್ಕು ಗಂಟೆ ನೀರು ಪೂರೈಸುವ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಕೋಟಿ ಕೋಟಿ ಹಣವನ್ನ ಖರ್ಚು ಮಾಡಿತ್ತು. ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸೋದು ಯೋಜನೆ ಉದ್ದೇಶವಾಗಿತ್ತು. ಗ್ಲಾಸ್ ಹೌಸ್ ನಿರ್ಮಿಸಿ ಕೆರೆಯನ್ನ ಸುಂದರ ಪ್ರವಾಸಿ ತಾಣ ಮಾಡೋ ಉದ್ದೇಶವೂ ಯೋಜನೆಯಲ್ಲಿತ್ತು. ಅದಕ್ಕಾಗಿ ಕೋಟಿ ಕೋಟಿ ಹಣ ಕೂಡ ಖರ್ಚಾಗಿತ್ತು. ಆದರೆ ಕೆರೆಗೆ ನೀರು ಮಾತ್ರ ಬಂದಿರಲಿಲ್ಲ.

ಕೆಲವು ದಿನಗಳ ಹಿಂದೆ ಸುರಿದ ನಿರಂತರ ಮಳೆಗೆ ಈಗ ಕೆರೆ ತುಂಬಿದೆ. ನೀರಿನಿಂದ ತುಂಬಿ ಕಂಗೊಳಿಸುತ್ತಿದೆ. ಇತ್ತ ನಗರದಲ್ಲಿ ನಿರಂತರ ನೀರು ಯೋಜನೆಗೆ ಹಾಕಿರೋ ನಲ್ಲಿಗಳು ತುಕ್ಕು ಹಿಡಿದು, ಧೂಳುಮಯವಾಗಿವೆ. ಹೀಗಾಗಿ ಯೋಜನೆಯನ್ನ ಸಮರ್ಪಕವಾಗಿ ಜಾರಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಏನೆಲ್ಲ ಪ್ರಯತ್ನ ಮಾಡಿದರೂ ಕೆರೆಗೆ ಹನಿ ನೀರೂ ಬಂದಿರಲಿಲ್ಲ. ಈಗ ಕೆರೆ ತುಂಬಿ ಹತ್ತು ಹದಿನೈದು ದಿನಗಳೆ ಕಳೆದಿವೆ. ಆದರೂ ನಗರಸಭೆ ಅಧಿಕಾರಿಗಳು ನಿರಂತರ ನೀರು ಪೂರೈಕೆಗೆ ಮುಂದಾಗುತ್ತಿಲ್ಲ. ಇಪ್ಪತ್ತು ನಾಲ್ಕು ಗಂಟೆ ನೀರು ಪೂರೈಸುವ ಯೋಜನೆಯ ನಲ್ಲಿಗಳು ನೀರು ಕಂಡು ಬಹಳ ದಿನಗಳು ಕಳೆದಿವೆ. ದಿನದ ಇಪ್ಪತ್ತು ನಾಲ್ಕು ಗಂಟೆ ಇರಲಿ, ಕನಿಷ್ಠ ದಿನಕ್ಕೊಮ್ಮೆಯಾದರೂ ಈ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ನಾಲ್ಕೈದು ದಿನಗಳು, ವಾರಕ್ಕೊಮ್ಮೆ ಮಾತ್ರ ಈ ನಲ್ಲಿಗಳಲ್ಲಿ ನೀರು ಬರುತ್ತಿವೆ. ಹೀಗಾಗಿ ಕೋಟಿ ಕೋಟಿ ಖರ್ಚು ಮಾಡಿದ ಯೋಜನೆಯ ಗತಿ ಏನಾಯ್ತು? ಅನ್ನೋ ಪ್ರಶ್ನೆ ಜನರಲ್ಲಿ ಮನೆ ಮಾಡಿದೆ.

ಈಗ ಯಾರು ಏನೇ ಸಾಹಸ ಮಾಡದಿದ್ದರೂ ಕೆರೆಗೆ ಭರಪೂರ ನೀರು ಬಂದಿದೆ. ಕೆರೆ ಖಾಲಿ ಇದೆ. ಕೆರೆಯಲ್ಲಿ ನೀರಿಲ್ಲ. ದಿನಪೂರ್ತಿ ನೀರು ಕೊಡೋದು ಹೇಗೆ ಅನ್ನೋ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೂ ಈಗ ಅದರ ಚಿಂತೆ ತಪ್ಪಿದಂತಾಗಿದೆ. ಆದ್ರೆ ಆದಷ್ಟು ಬೇಗ ಯೋಜನೆ ಕಾರ್ಯರೂಪಕ್ಕೆ ಬರಲಿ. ದಿನದ ಇಪ್ಪತ್ತು ನಾಲ್ಕು ಗಂಟೆ ಕಾಲ ಜನರಿಗೆ ನೀರು ಸಿಗುವಂತಾಗಲಿ ಎಂದು ಸ್ಥಳೀಯ ನಿವಾಸಿ ಮಾರುತಿ ಹೇಳುತ್ತಾರೆ.

Click to comment

Leave a Reply

Your email address will not be published. Required fields are marked *