-ನಗರಸಭೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪರದಾಟ
-ಸಾಲಮಾಡಿ ನೀರು ಕೊಳ್ಳಲು ಮುಂದಾಗುತ್ತಿರುವ ಜನ
ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಜನ ನಿತ್ಯ ಪರದಾಡುತ್ತಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಒಂದು ರೀತಿಯ ಸಮಸ್ಯೆಯಾದ್ರೆ ನಗರ ಪಟ್ಟಣಗಳಲ್ಲಿ ಇನ್ನೊಂದು ರೀತಿಯ ಸಮಸ್ಯೆಗಳು ತಲೆದೂರಿವೆ. ಬಡವರು ಸಹ ಅನಿವಾರ್ಯವಾಗಿ ದುಡ್ಡು ಕೊಟ್ಟೆ ನೀರು ಕುಡಿಯಬೇಕಾದ ಪರಸ್ಥಿತಿ ಎದುರಾಗಿದೆ.
ರಾಯಚೂರಿನ ಗಾಜಗಾರಪೇಟೆ, ವಾಸವಿನಗರ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ನಗರ ಪ್ರದೇಶದಲ್ಲಿದ್ದರೂ ಇವರಿಗೆ ನಾಲ್ಕು ದಿನಕ್ಕೆ ಒಂದು ಬಾರಿ ಕುಡಿಯುವ ನೀರು ಸಿಗುತ್ತಿದೆ. ಆ ನೀರು ಸಹ ಕೊಳಚೆ ವಾಸನೆಯಿದ್ದು, ಸಣ್ಣ ಮೀನು, ಹುಳಗಳು, ಕಸಕಡ್ಡಿ ನೀರಿನಲ್ಲಿ ಬರುತ್ತಿವೆ. ಅನಿವಾರ್ಯವಾಗಿ ಜನ ಇದೇ ನೀರನ್ನ ಸೋಸಿ ಕುಡಿಯುತ್ತಿದ್ದರು. ಆದ್ರೆ ಕಳೆದ ಒಂದು ತಿಂಗಳಿಂದ ಈ ನೀರನ್ನ ಕುಡಿದು ಮಕ್ಕಳು ಆಸ್ಪತ್ರೆ ಸೇರುತ್ತಿರುವುದರಿಂದ ಅನಿವಾರ್ಯವಾಗಿ ದುಡ್ಡು ಕೊಟ್ಟು ಶುದ್ಧ ಕುಡಿಯುವ ನೀರನ್ನ ತರುತ್ತಿದ್ದಾರೆ. ನೀರಿನ ಶುದ್ಧೀಕರಣ ಘಟಕದಲ್ಲಿ ಒಂದು ಕೊಡಕ್ಕೆ 7 ರೂಪಾಯಿ, ಒಂದು ಕ್ಯಾನ್‍ಗೆ 8 ರೂಪಾಯಿ ಕೊಡುತ್ತಿದ್ದಾರೆ. ಇಲ್ಲೂ ನೀರು ಸಿಗದಿದ್ದರೆ ಕಿರಾಣಿ ಅಂಗಡಿಗಳಲ್ಲಿ 35 ರಿಂದ 40 ರೂ. ಕೊಟ್ಟು ಒಂದು ಕ್ಯಾನ್ ನೀರನ್ನು ಪಡೆಯುತ್ತಿದ್ದಾರೆ.
ರಾಯಚೂರು ನಗರಸಭೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ಜನ ನೀರಿನ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆ ಒಂದೆಡೆಯಾದ್ರೆ ಶುದ್ಧ ಕಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ನಾಲ್ಕು ದಿನಕ್ಕೆ ಒಂದು ಬಾರಿ ನೀರು ಬಿಡುವ ನಗರಸಭೆ ಕನಿಷ್ಠ ಶುದ್ಧೀಕರಣವನ್ನೂ ಮಾಡದೇ ಕುಡಿಯುವ ನೀರು ಅಂತ ಸರಬರಾಜು ಮಾಡುತ್ತಿದೆ. ಇದರಿಂದ ಬೇಸತ್ತಿರುವ ಜನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗದಲ್ಲಿ ಬೋರ್‍ವೆಲ್ ನೀರಿನಲ್ಲಿ ಲವಣಾಂಶಗಳು ಹೆಚ್ಚಾಗಿರುವುದರಿಂದ ಪದೇ ಪದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಒಟ್ನಲ್ಲಿ, ಬೇಸಿಗೆ ಬಂದ್ರೆ ರಾಯಚೂರು ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ. ಈಗಾಗಲೇ ಜಿಲ್ಲಾಡಳಿತ ತೀವ್ರ ನೀರಿನ ಸಮಸ್ಯೆಗಳಿರುವ 68 ಗ್ರಾಮಗಳನ್ನ ಗುರುತಿಸಿದೆ. ಕೂಡಲೇ ಶುದ್ಧ ಕುಡಿಯುವ ಹಾಗೂ ದಿನಬಳಕೆ ನೀರನ್ನ ಸರಬರಾಜು ಮಾಡದಿದ್ದರೆ ನೀರಿಗಾಗೇ ಜನ ಸಾಲ ಮಾಡಬೇಕಾಗುತ್ತದೆ.