ಯಾದಗಿರಿ: ಜಿಲ್ಲೆಯ ಬಸವಸಾಗರ ಜಲಾಶಯದಿಂದ ಶನಿವಾರ ತಡರಾತ್ರಿಯಿಂದಲೇ ಕುಡಿಯಲು ನೀರು ಬಿಡಲಾಗಿದ್ದು, ಜಿಲ್ಲೆಯ ಜನ ಮತ್ತು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ 33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸತತ ಬರಗಾಲ ಆವರಿಸಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ 16 ಟಿಎಂಸಿ ನೀರನ್ನು ಕುಡಿಯುವ ಸಲುವಾಗಿ ಸಂಗ್ರಹಿಸಲಾಗಿತ್ತು. ಹೀಗಾಗಿ ಇಂದಿನಿಂದ ಐದು ದಿನಗಳ ಕಾಲ ನಿತ್ಯವು 2 ಸಾವಿರ ಕ್ಯುಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದೆ. ಶನಿವಾರ ಮಧ್ಯ ರಾತ್ರಿಯಿಂದಲೇ ಕಾಲುವೆಗೆ ನೀರು ಹರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸತತ ಬರಗಾಲ ಆವರಿಸಿ ಜನ, ಜಾನುವಾರುಗಳು ಕುಡಿಯುಲು ಹನಿ ಹನಿ ನೀರಿಗೂ ಹಾಹಕಾರ ಪಡುವಂತಾಗಿತ್ತು. ಕೊನೆಗೆ ಜಿಲ್ಲೆಯ ಜನರು ಮತ್ತು ಸುರಪುರ ಶಾಸಕ ರಾಜುಗೌಡ ಸೇರಿದಂತೆ ಹುಣಸಗಿಯ ಸ್ಥಳೀಯ ಜನಪ್ರತಿನಿಧಿಗಳು ಕುಡಿಯುವ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಒತ್ತಡ ಹಾಕಿದ್ದರು. ಜನರ ಹೋರಾಟಕ್ಕೆ ಮಣಿದ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ಜಲಾಶಯದಿಂದ ನಿನ್ನೆ ಮಧ್ಯ ರಾತ್ರಿಯಿಂದಲೇ ಎಡದಂಡೆ ಕಾಲುವೆ ನೀರು ಬಿಡುಗಡೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv