Connect with us

Bengaluru City

ನ್ಯೂ ಗೆಟಪ್ ನಲ್ಲಿ ಕನಸಿನ ರಾಣಿ ಮಾಲಾಶ್ರೀ-ಹೇಗಿದೆ ಹೊಸ ಲುಕ್?

Published

on

ಬೆಂಗಳೂರು: ಸ್ಯಾಂಡಲ್‍ವುಡ್ ನ ಕನಸಿನ ರಾಣಿ ಮಾಲಾಶ್ರೀ ತಮ್ಮ ಲುಕ್ ನ್ನು ಬದಲಿಸಿಕೊಂಡಿದ್ದಾರೆ. ಹೀರೋ ಇಲ್ಲದಿದ್ದರೂ ನಾನೇ ಸಿನಿಮಾ ಗೆಲ್ಲಿಸುತ್ತೇನೆ ಎಂದು ಸಾಬೀತು ಮಾಡಿದ ನಟಿ ಮಾಲಾಶ್ರೀ. ಅದೇ ಕನಸಿನ ರಾಣಿ ಮಾಲಾಶ್ರೀ ಹೊಸ ಗೆಟಪ್‍ನಲ್ಲಿ ಲಕಲಕಿಸಲಿದ್ದು, ಮತ್ತೆ ತೊಂಬತ್ತರ ದಶಕವನ್ನು ನೆನಪಿಸಲಿದ್ದಾರೆ.

ಒಂದು ಕಡೆ ಹೊಡಿ ಬಡಿ ಸಿನಿಮಾಗಳನ್ನು ಮಾಡುತ್ತಿದ್ದ ಮಾಲಾಶ್ರೀ ಇನ್ನೊಂದು ಕಡೆ ಸಾಂಸಾರಿಕ ಚಿತ್ರಗಳಲ್ಲೂ ಮಿಂಚುತ್ತಿದ್ದರು. ಮುತ್ತಿನಂಥ ಹೆಂಡ್ತಿ, ಸಿಂಧೂರ ತಿಲಕ, ಬೆಳ್ಳಿ ಕಾಲುಂಗರ ಹೀಗೆ ಹಲವಾರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದರು. ಪ್ರೇಮಿ, ತಾಯಿ, ಅಕ್ಕ, ಪತ್ನಿಯಾಗಿ ಹೊಸ ಹೊಸ ಅಭಿನಯದ ಸಾಧ್ಯತೆಗಳನ್ನು ತೋರಿಸಿದರು. ಮಾಲಾಶ್ರೀ ಮೇನಿಯಾ ಯಾವ ಮಟ್ಟಕ್ಕೆ ಇತ್ತೆಂದರೆ ಒಂದೇ ತಿಂಗಳಲ್ಲಿ ಇವರು ನಟಿಸಿದ ಎರಡು ಮೂರು ಸಿನಿಮಾ ರಿಲೀಸ್ ಆಗುವಷ್ಟು. ಅದು ಇವರಿಗಿದ್ದ ಕ್ರೇಜ್ ತೋರಿಸುತ್ತಿತ್ತು.

 

ಡಾ.ರಾಜ್‍ಕುಮಾರ್ ಬ್ಯಾನರ್ ನ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಮಾಲಾಶ್ರೀ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದು ರಾಘವೇಂದ್ರ ರಾಜ್‍ಕುಮಾರ್ ನಟಿಸಿದ ಎರಡನೇ ಸಿನಿಮಾ. ರಾಘಣ್ಣನಿಗೆ ಜೋಡಿಯಾದ ಮಾಲಾಶ್ರೀ, ದುರ್ಗಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು. ಆ ಗಂಡುಬೀರಿ ಸ್ಟೈಲು, ಖಡಕ್ ಡೈಲಾಗ್ ಡೆಲಿವರಿ, ಕಣ್ಣಿನಲ್ಲೇ ಕೊಲ್ಲುವಂತೆ ನೋಡುತ್ತಿದ್ದ ರೀತಿ, ಎಲ್ಲವೂ ಸೇರಿಕೊಂಡು ಮಾಲಾಶ್ರೀಗೆ ಕನ್ನಡದಲ್ಲಿ ಭದ್ರ ಸ್ಥಾನ ಒದಗಿಸಿತು.

ದಶಕಗಳ ಕಾಲ ಮಾಲಾಶ್ರೀ ಚಿತ್ರರಂಗವನ್ನು ಆಳಿದರು. ಬಹುತೇಕ ಎಲ್ಲಾ ಸ್ಟಾರ್‍ಗಳ ಜತೆ ನಟಿಸಿದರು. ಶಿವಣ್ಣ, ಅಂಬರೀಶ್, ರವಿಚಂದ್ರನ್, ಶಶಿಕುಮಾರ್, ಸುನೀಲ್…ಒಂದೊಂದು ಚಿತ್ರದಲ್ಲಿ ಒಂದೊಂದು ವಿಭಿನ್ನ ಪಾತ್ರ ಮಾಡಿದರು. ಈ ಹೊತ್ತಿನಲ್ಲೇ ಇವರು ನಿರ್ಮಾಪಕ ರಾಮುವನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ಕೆಲವು ವರ್ಷ ಚಿತ್ರರಂಗದಿಂದ ದೂರವಾದರು. ಪತಿ ರಾಮು ಒತ್ತಾಯಕ್ಕೆ ಮಣಿದು ಮತ್ತೆ ಬಣ್ಣ ಹಚ್ಚಿದರು. ಅಲ್ಲಿಂದ ಫುಲ್ ಆ್ಯಕ್ಷನ್ ಹೀರೋಯಿನ್ ಆದರು. ದೇಹದ ತೂಕ ಹೆಚ್ಚಿದ್ದರೂ ಮಾಲಾಶ್ರೀ ಫೈಟಿಂಗ್ ಸೀನ್‍ಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು.

ಕಳೆದ ಹದಿನೈದು ವರ್ಷಗಳಿಂದ ಅವರು ಆ್ಯಕ್ಷನ್ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಅದಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇ ಅವರ ನ್ಯೂ ಗೆಟಪ್ಪು. ಹೌದು, ಬಾಬ್ ಕಟ್ ಮಾಡಿಸಿಕೊಂಡಿದ್ದ ಮಾಲಾಶ್ರೀ ಈಗ ಉದ್ದುದ್ದ ಕೂದಲು ಬಿಡುತ್ತಿದ್ದಾರೆ. ಮತ್ತು ದೇಹದ ತೂಕವನ್ನು ಇಳಿಸುತ್ತಿದ್ದಾರೆ. ಒಂದೊಮ್ಮೆ ಕನಸಿನ ರಾಣಿಯಾಗಿ ಮೆರೆದಿದ್ದ ಇವರು ಮತ್ತದೆ ರೂಪ ಪಡೆಯಲು ರೆಡಿಯಾಗಿದ್ದಾರೆ. ಉಪ್ಪು ಹುಳಿ ಖಾರದ ನಂತರ ಸಾಂಸಾರಿಕ ಕತೆಯ ಸಿನಿಮಾದಲ್ಲಿ ಈ ಹೊಸ ಲುಕ್ ನಿಮಗೆ ನೋಡಲು ಸಿಗುತ್ತದೆ.

Click to comment

Leave a Reply

Your email address will not be published. Required fields are marked *