ಕರೆದಾಕ್ಷಣ ನೈಟ್ ಡ್ಯೂಟಿಗೆ ಬರದ್ದಕ್ಕೆ ಶಾಸಕನಿಂದ ದೂರು- ವೈದ್ಯೆ ವೀಣಾಸಿಂಗ್ ಸ್ಪಷ್ಟನೆ

Public TV
2 Min Read
VEENA 1

ಬೆಂಗಳೂರು/ಮೈಸೂರು: ಕರೆದಾಕ್ಷಣ ಮನೆಗೆ ಚಿಕಿತ್ಸೆ ನೀಡಲು ಬಂದಿಲ್ಲವೆಂದು ಆರೋಪಿಸಿ ವೈದ್ಯೆ ಡಾ. ವೀಣಾಸಿಂಗ್ ವಿರುದ್ಧ ಜೆಡಿಎಸ್ ಶಾಸಕ ಕೆ. ಮಹದೇವ್ ದೂರು ದಾಖಲಿಸಿದ್ದಾರೆ. ವೈದ್ಯೆ ಡಾ. ವೀಣಾ ಸಿಂಗ್ ಅವರು ನಡೆದ ಘಟನೆಯ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಸೆಪ್ಟೆಂಬರ್ 18 ರಂದು ನಾನು ತುರ್ತು ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸುಮಾರು 100 ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ ನಾನೊಬ್ಬಳೇ ಅಂದು ಹಾಜರಾಗಿದ್ದೆ. ಇದೇ ದಿನ ಸಂಜೆ 5.30ಕ್ಕೆ ಹೆರಿಗೆ ರೋಗಿಯೊಬ್ಬರು ದಾಖಲಾಗಿದ್ದರು. ಅಲ್ಲದೇ 8.45ರ ಸುಮಾರಿಗೆ ಅಪಘಾತದಿಂದ ಗಾಯಗೊಂಡು ಮೂವರಿಗೆ ಚಿಕಿತ್ಸೆ ನೀಡುತ್ತಿದ್ದೆ.

VEENA SIGH copy

ಇದೇ ಸಮಯದಲ್ಲಿ ಹೆರಿಗೆಗೆ ಆಗಮಿಸಿದ್ದ ರೋಗಿಯೊಬ್ಬರಿಗೆ ನೋವು ಕಾಣಿಸಿಕೊಂಡಿತ್ತು. ನಾನು ಅವರಿಗೆ ಹೆರಿಗೆ ಕೊಠಡಿಯಲ್ಲಿ ಚಿಕಿತ್ಸೆ ನೀಡುತ್ತಿದ್ದೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಗಿರಿಜಾ ಎಂಬವರು ಬಂದು, ಎಂಎಲ್‍ಎ ಅವರಿಗೆ ಹುಷಾರಿಲ್ಲ ಎಂದು ಆಟೋ ಚಾಲಕರೊಬ್ಬರು ಬಂದಿದ್ದಾರೆ ಎಂದು ಹೇಳಿದರು. ಕೂಡಲೇ ನಾನು ಅವರ ಬಳಿ ಹೋಗಿ ವಿಚಾರಿಸಿದಾಗ, ಆಟೋ ಚಾಲಕ ಶಾಸಕರಿಗೆ ಹುಷಾರಿಲ್ಲ ಬೇಗ ನನ್ನ ಜೊತೆ ಬನ್ನಿ ಎಂದು ಹೇಳಿದರು.

ಆದರೆ ಆಸ್ಪತ್ರೆಯಲ್ಲಿ ಹೆರಿಗೆ ರೋಗಿ ಹಾಗೂ ಅಪಘಾತದಿಂದ ಗಾಯಗೊಂಡಿದ್ದವರಿಗೆ ನಾನು ಚಿಕಿತ್ಸೆ ನೀಡುತ್ತಿದ್ದೆ. ಹೀಗಾಗಿ ಶಾಸಕರ ಆರೋಗ್ಯ ತಪಾಸಣೆಗೆ ಹೋಗಲು ನಾನು ಕೂಡಲೇ ನಮ್ಮ ಮೆಡಿಕಲ್ ಆಫೀಸರ್ ಗೆ ಕರೆ ಮಾಡಿ ವಿಚಾರಿಸಿದೆ. ಅವರು ಆಟೋ ಚಾಲಕನೊಂದಿಗೆ ಮಾತನಾಡಲು ಫೋನ್ ಕೊಡಿ ಎಂದು ಹೇಳಿದರು. ಆದರೆ ಆರೋಗ್ಯಾಧಿಕಾರಿಯ ಜೊತೆ ಮಾತನಾಡಲು ಆಟೋ ಚಾಲಕ ನಿರ್ಲಕ್ಷ್ಯಿಸಿ, ಶಾಸಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿನಿ ಎಂದು ತರಾತುರಿಯಲ್ಲಿ ಹೊರಟು ಹೋದರು. ಇದನ್ನೂ ಓದಿ: ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

KIRIK MLA

ಶಾಸಕರಿಗೆ ಹುಷಾರಿಲ್ಲ ಅವರು ಆಸ್ಪತ್ರೆಗೆ ಬರುತ್ತಾರೆಂದು ತಿಳಿದು, ನಾನು ಹಾಗೂ ಆಸ್ಪತ್ರೆಯ ಸಿಬ್ಬಂದಿ ಐಸಿಯು ಅನ್ನು ಸಿದ್ಧಪಡಿಸಿಕೊಂಡು ಅವರಿಗಾಗಿ ಕಾಯುತ್ತಿದ್ದೆವು. ಆದರೆ ಆಟೋ ಚಾಲಕ ಶಾಸಕ ಅನಾರೋಗ್ಯದ ತೀವ್ರತೆಯ ಬಗ್ಗೆ ನನಗೆ ನಿಖರವಾದ ಯಾವುದೇ ಮಾಹಿತಿ ನೀಡಿರಲಿಲ್ಲ. ಇದಾದ ನಂತರ ಸೆಪ್ಟೆಂಬರ್ 19 ರಂದು ಸ್ಥಳೀಯ ಪತ್ರಿಕೆಗಳಲ್ಲಿ ಶಾಸಕರ ಆರೋಗ್ಯ ವಿಚಾರಿಸದ ವೈದ್ಯೆ ಎಂದು ಪ್ರಕಟಿಸಿದ್ದಾಗ, ನನಗೆ ಶಾಸಕರ ಆರೋಗ್ಯದ ತೀವ್ರತೆಯ ಬಗ್ಗೆ ಅರಿವಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್ ಶಾಸಕನೊಂದಿಗೆ ಕಿರಿಕ್- ಡಾ.ವೀಣಾಸಿಂಗ್ ಪಿರಿಯಾಪಟ್ಟಣದಿಂದ ಎತ್ತಂಗಡಿ?

310410

ಇದಾದ ಕೂಡಲೇ ಅದೇ ದಿನ ಸಂಜೆ ನಮ್ಮ ಹಿರಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳೊಂದಿಗೆ ಶಾಸಕರ ಮನೆಗೆ ಹೋಗಿ ನಡೆದ ಅಚಾತುರ್ಯದ ಬಗ್ಗೆ ವಿವರಿಸಿದೆವು. ಅಲ್ಲದೇ ಆಸ್ಪತ್ರೆಯಲ್ಲಿನ ರೋಗಿಗಳ ಬಗ್ಗೆಯೂ ಮಾಹಿತಿ ನೀಡಿದೆವು. ಆದರೆ ಶಾಸಕರು ನಮ್ಮ ಮಾತನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ, ಅಲ್ಲದೇ ಅವರು ಈ ಬಗ್ಗೆ ನನ್ನ ವಿರುದ್ಧ ದೂರನ್ನು ನೀಡಿದ್ದಾರೆ. ಪುನಃ ನಾನು ಅವರನ್ನು ಭೇಟಿ ಮಾಡಿದಾಗ ಅವರು ದಾಖಲಿಸಿರುವ ದೂರನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಹೇಳಿದರೇ ಹೊರತು, ಕ್ಷಮಾಪಣಾ ಪತ್ರ ನೀಡುವಂತೆ ಹೇಳಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=LsbzC-2HiOA

 

Share This Article
Leave a Comment

Leave a Reply

Your email address will not be published. Required fields are marked *