ಬೆಂಗಳೂರು: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ.
ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಶ್ರೀಗಳು ಶುಕ್ರವಾರ ರಾತ್ರಿ ಗಂಜಿ, ಅನ್ನ, ತಿಳಿ ಸಾರು ಮತ್ತು ಫಲಾಹಾರ ಸೇವಿಸಿದ್ದಾರೆ. ವೈದ್ಯರ ಸಲಹೆಯಂತೆ ಸ್ವಾಮೀಜಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.
Advertisement
ಶ್ರೀಗಳ ಲಿಂಗ ಪೂಜೆಗೆ ಪೂಜಾಸಾಮಗ್ರಿಗಳ ಮಠದಿಂದ ತರಿಸಲಾಗಿದೆ. ಶ್ರೀಗಳಿಗೆ ಮಠದಿಂದಲೇ ಪ್ರಸಾದವನ್ನ ಶಿಷ್ಯವೃಂದ ತಂದಿದ್ದಾರೆ. ಬೆಳಗ್ಗೆ 7:30ರ ಸುಮಾರಿಗೆ ಶ್ರೀಗಳು ಆಸ್ಪತ್ರೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಇಂದು ಮತ್ತೊಂದು ಸುತ್ತಿನ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ ನಡೆಯಲಿದೆ. ಮಠಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಚಿಕಿತ್ಸೆ ಮುಂದುವರೆಸಿ ಅಂತಾ ಈಗಾಗಲೇ ಶ್ರೀಗಳು ಹೇಳಿರೋದ್ರಿಂದ ಇಂದು ಸ್ವಾಮೀಜಿಯವ್ರನ್ನ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ. ಡಿಸ್ಚಾರ್ಜ್ ಬಳಿಕ ಶ್ರೀಗಳಿಗೆ ಮಠದಲ್ಲೇ ಚಿಕಿತ್ಸೆ ಮುಂದುವರೆಸುವ ಸಾಧ್ಯತೆಯಿದೆ. ಇಂದು ಆರೋಗ್ಯ ತಪಾಸಣೆಯ ರಿಪೋರ್ಟ್ ಬಂದ ಬಳಿಕ ವೈದ್ಯರ ತಂಡ ಮಠದವರ ಜೊತೆ ಚರ್ಚೆ ಮಾಡಿ ಮುಂದಿನ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಿದ್ದಾರೆ.
Advertisement
ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟಂಟ್‍ಗೆ ಸೋಂಕು ತಗುಲಿದ ಪರಿಣಾಮ ಬಿಜಿಎಸ್ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಸುಮಾರು ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಗ್ಯಾಸ್ಟ್ರೋ ಎಂಟಾಲಾಜಿಸ್ಟ್ ಡಾ.ರವೀಂದ್ರ ನೇತೃತ್ವದಲ್ಲಿ ಎಂಡೋಸ್ಕೋಪಿ ಮೂಲಕ ಸ್ಟಂಟ್ ಬದಲಾವಣೆ ಮಾಡಲಾಯ್ತು. ಸದ್ಯ ಶ್ರೀಗಳನ್ನು ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದ್ದು, 24 ಗಂಟೆಗಳಲ್ಲಿ ಶ್ರೀಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಅಂತ ವೈದ್ಯ ರವೀಂದ್ರ ಹೇಳಿದ್ದಾರೆ.
Advertisement
ಸಿದ್ದಗಂಗಾ ಮಠದಲ್ಲಿ ಶ್ರೀಗಳ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ರಾಜ್ಯದ ನಾನಾ ಭಾಗದಿಂದ ಆಗಮಿಸಿರುವ ಭಕ್ತಾದಿಗಳು ಮಠದಲ್ಲೇ ಉಳಿದುಕೊಂಡಿದ್ದು ಶಿವಕುಮಾರ ಸ್ವಾಮಿಜಿಗಳ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ. ಅಲ್ಲದೆ ಶ್ರೀಗಳು ಕುಳಿತು ಭಕ್ತಾದಿಗಳಿಗೆ ಆಶೀರ್ವಾದ ಮಾಡುತಿದ್ದ ಗದ್ದುಗೆಗೆ ಭಕ್ತರು ನಮಿಸಿ ಶ್ರೀಗಳು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತಿದ್ದಾರೆ.