ರಕ್ತದಾನ ಮಾಡೋ ಮೂಲಕ ಜಾಗೃತಿ ಮೂಡಿಸಿದ ಶ್ರೀಗಳು

Public TV
2 Min Read
hvr blood donate 3

ಹಾವೇರಿ: ನಾವು ಔಷಧಿಗಳನ್ನು ಉತ್ಪಾದನೆ ಮಾಡಬಹುದೇ ವಿನಃ ರಕ್ತವನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲ, ಅದು ದಾನ ಮಾಡುವುದರಿಂದ ಮಾತ್ರ ಲಭಿಸುತ್ತದೆ ಎಂದು ರಕ್ತದಾನ ಮಾಡಿ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಜಾಗೃತಿ ಮೂಡಿಸಿದ್ದಾರೆ.

ಹೊಸಮಠದ ಬಸವ ಕೇಂದ್ರದಲ್ಲಿ ಜರುಗುತ್ತಿರುವ ಲಿಂಗೈಕ್ಯ ಜಗದ್ಗುರು ಶ್ರೀ ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳು ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ಸ್ಮರಣೋತ್ಸವ ನಿಮಿತ್ಯ ಶರಣ ಸಂಸ್ಕೃತಿ ಉತ್ಸವ-2019ರ ಪ್ರಯಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಸವಕೇಂದ್ರದಲ್ಲಿ ಜಯಪ್ರಿಯಾ ಆಸ್ಪತ್ರೆ ಹುಬ್ಬಳ್ಳಿ, ವೀರಾಪುರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾವೇರಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ರಕ್ತದಾನ ಶಿಬಿರಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.

hvr blood donate 1

ಮಹಿಳೆಯರಿಗೆ ಹೆರಿಗೆಯ ಸಂದರ್ಭದಲ್ಲಿ ರಕ್ತವು ಅವಶ್ಯಕತೆಯಿದ್ದಾಗ ಸುಲಭವಾಗಿ ದೊರಕಿದರೆ ತಾಯಿ ಮತ್ತು ಮಗು ಆರೋಗ್ಯವಾಗಿರಲು ಸಾಧ್ಯ. ರಕ್ತವು ಸಕಾಲಕ್ಕೆ ದೊರೆಯದೆ ಇದ್ದಲ್ಲಿ ಸಾವು ಉಂಟಾಗುವ ಸಂಭವವಿರುತ್ತದೆ. ಹೀಗಾಗಿ ನಾವೆಲ್ಲಾ ಆರೋಗ್ಯವಾಗಿರಲು ಹಾಗೂ ಸಮಾಜವನ್ನು ಆರೋಗ್ಯವಾಗಿಡಲು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕರೆ ನೀಡಿದರು.

hvr blood donate

ಸಾತ್ವಿಕ ಆಹಾರವನ್ನು ಸೇವಿಸದೆ ಇರುವುದರಿಂದ ಯುವ ಜನತೆ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಅತಿಯಾದ ಮೊಬೈಲ್ ಮತ್ತು ದೂರದರ್ಶನ ವಿಕ್ಷಣೆಯಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ವಿವಿಧ ರೀತಿಯ ದೃಷ್ಟಿದೋಷಗಳಿಗೆ ಒಳಗಾಗುತ್ತಿದ್ದೇವೆ. ಹೀಗಾಗಿ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಮೊಬೈಲ್ ಮತ್ತು ದೂರದರ್ಶನದ ಬಳಕೆ ಮಾಡಬೇಕೆಂದರು.

hvr blood donate 4

ಆಯೋಜಕ ಡಾ. ಬಸವರಾಜ ವೀರಾಪುರ ಮಾತನಾಡಿ, ಮಠ ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಆಯೋಜಿಸುವ ಉಚಿತ ತಪಾಸಣಾ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆಯಬೇಕೆಂದರು. ಶಿಬಿರದಲ್ಲಿ ಹುಬ್ಬಳ್ಳಿಯ ಜಯಪ್ರೀಯಾ ಆಸ್ಪತ್ರೆಯ ವೈದ್ಯ ಡಾ. ವೆಂಕಟರಾಮ್, ನಗರದ ವೈದ್ಯರಾದ ಡಾ. ಮೃತ್ಯುಂಜಯ ತುರಕಾಣಿ ತಪಾಸಣೆಯನ್ನು ನೆರವೇರಿಸಿದರು.

hvr blood donate 2

ರಕ್ತದಾನ ಶಿಬಿರದಲ್ಲಿ 100ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ನೂರಕ್ಕೂ ಅಧಿಕ ಜನರು ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡವರಲ್ಲಿ 32 ಜನರಿಗೆ ಉಚಿತ ಶಸ್ತ್ರಚಿಕಿತ್ಸೆಗೆ ಹುಬ್ಬಳ್ಳಿಯ ಜಯಪ್ರೀಯಾ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಹೊಸಮಠದ ಬಸವ ಶಾಂತಲಿಂಗ ಶ್ರೀಗಳು, ಶರಣ ಸಂಸ್ಕೃತಿ ಉತ್ಸವ ಸಮಿತಿ ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ, ದಯಾನಂದ ಯಡ್ರಾಮಿ, ಡಾ. ಮೃಂತ್ಯುಂಜಯ ತುರಕಾಣಿ ರುದ್ರೇಶ ಚೆನ್ನಣ್ಣನವರ, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ, ಚಂದ್ರಶೇಖರ ಶಿಶುನಳ್ಳಿ, ಮುರುಗೆಪ್ಪ ಕಡೆಕೊಪ್ಪ ಸೇರಿದಂತೆ ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *