ಗಾಜನೂರು ತೋಟದ ಮನೆಯ ಜಮೀನಿನಲ್ಲಿ ನಾಳೆ ವರನಟ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

Public TV
1 Min Read
rajkumar Sister 1

ಚಾಮರಾಜನಗರ: ಮೇರುನಟ ಡಾ.ರಾಜ್‌ಕುಮಾರ್ (Dr.Rajkumar) ಅವರ ಸಹೋದರಿ ನಾಗಮ್ಮ (Nagamma) ನಿಧನರಾಗಿದ್ದಾರೆ. ತಮಿಳುನಾಡಿನ ತಾಳವಾಡಿ ತಾಲೂಕು‌ ದೊಡ್ಡಗಾಜನೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಹುಟ್ಟೂರು ದೊಡ್ಡಗಾಜನೂರಿನಲ್ಲಿ ವಾಸವಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಮ್ಮ ಇಂದು ನಿಧನರಾಗಿದ್ದಾರೆ. ಅವರಿಗೆ‌ 93 ವರ್ಷ ವಯಸ್ಸಾಗಿತ್ತು. ನಾಗಮ್ಮ ಅವರಿಗೆ ತಮ್ಮ ಅಣ್ಣ ಡಾ.ರಾಜ್‌ಕುಮಾರ್ ಮಕ್ಕಳೆಂದರೆ ಬಲು ಪ್ರೀತಿ. ಅದರಲ್ಲೂ ಪುನೀತ್ ‌ರಾಜ್‌ಕುಮಾರ್ ಎಂದರೆ ಪಂಚಪ್ರಾಣ. ಡಾ.ರಾಜ್‌ ಹಾಗೂ ಪಾರ್ವತಮ್ಮ ಶೂಟಿಂಗ್‌ಗೆ ಅಂತ ಹೊರಗೆ ಹೋದಾಗಲೆಲ್ಲ ಅವರ ಮಕ್ಕಳನ್ನು ಸಾಕಿ ಸಲಹಿದ್ದೇ ನಾಗಮ್ಮ ಅವರಂತೆ. ಹಾಗಾಗಿ, ರಾಜ್‌ಕುಮಾರ್ ಅವರ ಮಕ್ಕಳಿಗೆ ನಾಗಮ್ಮ ಅವರೊಡನೆ ಒಡನಾಟ ಇಂದು ನಿನ್ನೆಯದಲ್ಲ. ಆಗಾಗ್ಗೆ ದೊಡ್ಡಗಾಜನೂರಿಗೆ ಕುಟುಂಬ ಸಮೇತರಾಗಿ ಬರುತ್ತಿದ್ದ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್, ನಾಗಮ್ಮ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು. ಇದನ್ನೂ ಓದಿ: ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

ನಾಗಮ್ಮ ಅವರಿಗೆ ಪುನೀತ್‌ ರಾಜ್‌ಕುಮಾರ್ ಅಂದರೆ ಹೆಚ್ಚು ಪ್ರೀತಿ. ಅವರು, ‘ಅಪ್ಪು ಚನ್ನಾಗಿದಿಯಾ? ನಿನಗೆ 50 ವರ್ಷ ಆಯ್ತಂತೆ, ನನ್ನನ್ನ ಒಂದ್ ಸಾರಿ ಬಂದ್ ನೋಡ್ಕೊಂಡು ಹೋಗೋ’ ಎಂದು ಪುನೀತ್‌ ಬರ್ತ್‌ಡೇ ದಿನ ಮಾತನಾಡಿದ್ದರು. ಪುನೀತ್‌ ಮೃತಪಟ್ಟಿದ್ದು ನಾಗಮ್ಮ ಅವರಿಗೆ ಗೊತ್ತಿರಲಿಲ್ಲ. ಮನೆಯವರು ಆ ವಿಚಾರವನ್ನು ನಾಗಮ್ಮರಿಗೆ ಹೇಳಿರಲಿಲ್ಲ. ತಿಳಿಸಿದರೆ ಎಲ್ಲಿ ನಾಗಮ್ಮ ಅವರಿಗೆ ಆಘಾತವಾಗುತ್ತದೋ ಎಂಬ ಭಯದಿಂದ ವಿಷಯ ಮುಚ್ಚಿಡಲಾಗಿತ್ತು. ನಾಗಮ್ಮ ಅವರಿಗೆ ಐವರು ಪುತ್ರರು, ಮೂವರು ಪುತ್ರಿಯರಿದ್ದಾರೆ. ಚನ್ನೈನಲ್ಲಿದ್ದ ಓರ್ವ ಪುತ್ರ ಕಳೆದ ತಿಂಗಳಷ್ಟೇ ನಿಧನರಾಗಿದ್ದರು. ಆ ವಿಷಯವು ಸಹ ನಾಗಮ್ಮ ಅವರಿಗೆ ಗೊತ್ತಿರಲಿಲ್ಲ.

ದೊಡ್ಡ ಗಾಜನೂರಿನ ತೋಟದಲ್ಲಿ ನಾಗಮ್ಮ ಅವರ ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ನಡೆಯಲಿದೆ. ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್‌ ರಾಜಕುಮಾರ್ ಹಾಗೂ ಡಾ.ರಾಜ್ ಕುಟುಂಬವರ್ಗದವರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಡಾ.ರಾಜ್ ಅಪಹರಣ ಪ್ರಕರಣಕ್ಕೆ 25 ವರ್ಷ – 2000 ಇಸವಿಯಲ್ಲಿ ಅಪಹರಿಸಿದ್ದ ವೀರಪ್ಪನ್

Share This Article