ಚೆನ್ನೈ: ವರನಟ ಡಾ.ರಾಜ್‍ಕುಮಾರ್ ಅವರ ಅಪಹರಣ ಪ್ರಕರಣ ಸಂಬಂಧ 18 ವರ್ಷಗಳ ಬಳಿಕ ತೀರ್ಪು ಪ್ರಕಟಗೊಂಡಿದ್ದು, 9 ಆರೋಪಿಗಳನ್ನು ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂ ಕೋರ್ಟ್ ಖುಲಾಸೆಗೊಳಿಸಿದೆ.
ರಾಜ್‍ಕುಮಾರ್ ಅಪಹರಣ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪೊಲೀಸ್ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ ನೀಡುವಲ್ಲಿ ವಿಫಲ ಹಾಗೂ ರಾಜ್‍ಕುಮಾರ್ ಕುಟುಂಬಸ್ಥರು ಸಾಕ್ಷ್ಯ ಹೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಣಿ ವೀರಪ್ಪನ್ ಸಹಚರರನ್ನು ಖುಲಾಸೆಗೊಳಿಸಿದ್ದಾರೆ.
Advertisement
ಅಪಹರಣವನ್ನು ಕಣ್ಣಾರೆ ಕಂಡಿದ್ದ ಪಾರ್ವತಮ್ಮ ಕೂಡಾ ಸಾಕ್ಷಿ ಹೇಳಲು ಹಿಂದೇಟು ಹಾಕಿದ್ದರು. ಜೊತೆಗೆ 42 ಜನ ಸಾಕ್ಷಿದಾರರು, 52 ದಾಖಲೆ ಹಾಗೂ 31 ಗನ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳ ತನಿಖೆಯ ಬಳಿಕವೂ, ಸೂಕ್ತ ಸಾಕ್ಷಾಧಾರಗಳು ಸಿಕ್ಕಿರಲಿಲ್ಲ. ಹೀಗಾಗಿ ಇಂದು ಕೋರ್ಟ್ ಪ್ರಕರಣವನ್ನು ಖುಲಾಸೆಗೊಳಿಸಿದೆ.
Advertisement
Advertisement
ಏನಿದು ಪ್ರಕರಣ?
ಜುಲೈ 30, 2000ರಂದು ರಾಜ್‍ಕುಮಾರ್ ಹಾಗೂ ಪತ್ನಿ ಪಾರ್ವತಮ್ಮ ತಲವಾಡಿಯ ದೊಡ್ಡಗಾಜನೂರು ಗ್ರಾಮದ ಗೃಹ ಪ್ರವೇಶಕ್ಕೆ ಹೊರಟಿದ್ದರು. ಈ ವೇಳೆ ವೀರಪ್ಪನ್ ಹಾಗೂ ಆತನ ಸಹಚರರು ಕಾರನ್ನು ಅಡ್ಡಗಟ್ಟಿ ಪಾರ್ವತಮ್ಮ ಅವರ ಎದುರೇ ರಾಜ್‍ಕುಮಾರ್, ಅಳಿಯ ಎಸ್.ಎ.ಗೋವಿಂದರಾಜು, ಸಂಬಂಧಿ ನಾಗೇಶ್ ಹಾಗೂ ಸಹಾಯಕ ನಿರ್ದೇಶಕ ನಾಗಪ್ಪ ಅವರನ್ನು ಅಪಹರಿಸಿದ್ದರು. ಈ ವಿಷಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು.
Advertisement
ಬಳಿಕ ಎಲ್ಲರನ್ನೂ ಕಾಡಿನಲ್ಲಿ ಇಟ್ಟುಕೊಂಡು ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜ್ ಬಿಡಿಸಲು ಉಭಯ ರಾಜ್ಯಗಳು ಭಾರೀ ಶ್ರಮವಹಿಸಿದ್ದವು. ಅದೇ ವರ್ಷ ಸೆಪ್ಟೆಂಬರ್ 28ರಂದು ರಾಜ್‍ಕುಮಾರ್ ಅಳಿಯ ಗೋವಿಂದರಾಜು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. 108 ದಿನಗಳ ಕಾಲ ಇರಿಸಿಕೊಂಡು, ನವೆಂಬರ್ 15ರಂದು ರಾಜ್‍ಕುಮಾರ್ ಅವರನ್ನು ಬಿಟ್ಟು ಕಳುಹಿಸಿದ್ದ.
ಈ ಕುರಿತು ಆರೋಪಿಗಳ ಮೇಲೆ ತಲವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2004ರ ಅಕ್ಟೋಬರ್ 18ರಂದು ಆಪರೇಷನ್ ಕೋಕೂನ್ ಹೆಸರಲ್ಲಿ ನಡೆಸ ಪೊಲೀಸ್ ಎನ್‍ಕೌಂಟರ್ ನಲ್ಲಿ ವೀರಪ್ಪನ್ ಬಲಿಯಾಗಿದ್ದ. ವೀರಪ್ಪನ್ ಸಹಚರ ಸೇತುಕುಡಿ, ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಉಳಿದ ಒಂಬತ್ತು ಜನರನ್ನು ಪೊಲೀಸರು ಬಂಧಿಸಿ, ತನಿಖೆ ಆರಂಭಿಸಿದ್ದರು. 2006ರಲ್ಲಿ ರಾಜ್ ನಿಧನರಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv