– 3ನೇ ಸಲ ಪ್ರಧಾನಿ ಆದ್ರೂ ಮೋದಿಗೆ ಸೌಜನ್ಯವಿದೆ, ವಿಜಯೇಂದ್ರಗೆ ಆ ಸೌಜನ್ಯವಿಲ್ಲ
– ನಿನ್ನ ನಡುನೀರಲ್ಲಿ ಕೈಬಿಡ್ತಾರೆ ಅಂತ ಸಿದ್ದರಾಮಯ್ಯ ನಂಗೆ ಹೇಳಿದ್ರು!
ಬೆಂಗಳೂರು: ಬಿಜೆಪಿ (BJP) ಮುಗಿಸಲು ವಿಜಯೇಂದ್ರ (B.Y Vijayendra) ಹೊರಟಿದ್ದಾರೆ. ಅವರು ಇದ್ದರೆ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ (K.Sudhakar) ವಾಗ್ದಾಳಿ ನಡೆಸಿದ್ದಾರೆ.
ತಮ್ಮ ನಿವಾಸದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಧ್ಯಕ್ಷರ ಬದಲಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನನ್ನ ಬಳಿ ಚರ್ಚೆ ಮಾಡದೇ ವಿಜಯೇಂದ್ರ ನನ್ನ ಜಿಲ್ಲೆಯ ಅಧ್ಯಕ್ಷರ ಬದಲಾವಣೆ ಮಾಡಿದ್ದಾರೆ. ವಿಜಯೇಂದ್ರ ಅಹಂಕಾರ, ದರ್ಪದಿಂದ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ. ಅವರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ಕೊಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಜಯೇಂದ್ರ ಚಿಕ್ಕಬಳ್ಳಾಪುರದಲ್ಲಿ ನನ್ನ ರಾಜಕೀಯ ಸಮಾಧಿ ಮಾಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಮರುಭೂಮಿಯಂತಿತ್ತು. ಅಲ್ಲಿ ತಳಹಂತದಿಂದ ಪಕ್ಷ ಕಟ್ಟಿದವನು ನಾನು. ವಿಜಯೇಂದ್ರ ಯಾರನ್ನೂ ವಿಶ್ವಾಸಕ್ಕೆ ಪಡೆಯದೇ ಜಿಲ್ಲೆಗಳಲ್ಲಿ ಅವರಿಗೆ ಜೀ ಹುಜೂರ್ ಅನ್ನೋರನ್ನೇ ನೇಮಿಸಿದ್ದಾರೆ. ಅವರ ಅಹಂಕಾರ, ದರ್ಪಕ್ಕೆ ನನ್ನ ಧಿಕ್ಕಾರ. ವಿಜಯೇಂದ್ರ ಬಿಜೆಪಿ ಮುಗಿಸ್ತಾರೆ. ತಾಕತ್ ಇದ್ರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ವಿಜಯೇಂದ್ರ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.
ತಂದೆಯ ಗುಣಗಳಾವುದು ವಿಜಯೇಂದ್ರಗೆ ಬಂದಿಲ್ಲ. ಅವರದ್ದು ಹಠ, ದ್ವೇಷದ ರಾಜಕಾರಣ. ನನ್ನ ತಾಳ್ಮೆ ಮುಗೀತು ಇನ್ನೇನಿದ್ರೂ ಯುದ್ಧವಷ್ಟೇ. ವರಿಷ್ಠರ ಅಪಾಯಿಂಟ್ಮೆಂಟ್ ಕೇಳಿದ್ದು, ದೆಹಲಿಗೆ ಹೋಗಿ ದೂರು ಕೊಡುತ್ತೇನೆ. ಪಕ್ಷದಲ್ಲಿ ಯಾವುದೂ ಸರಿಯಾಗದಿದ್ದರೆ ಜಿಲ್ಲೆಯ ಮುಖಂಡರ ಬಳಿ ಚರ್ಚಿಸಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುತ್ತೇನೆ. ಕೋರ್ ಕಮಿಟಿ ಸಭೆಯಲ್ಲಿ ಚಿಕ್ಕಬಳ್ಳಾಪುರ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಮಾಡಲೇ ಇಲ್ಲ. ಇವತ್ತು ಏಕಾಏಕಿ ಪ್ರಕಟ ಮಾಡಿದ್ದೀರಿ. ಇವರ ವ್ಯವಹಾರ, ರಾಜಕಾರಣ ಎಲ್ಲವನ್ನೂ ನಾಯಕರಿಗೆ ಹೇಳ್ತೇನೆ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ, ಹಾವೇರಿಯಲ್ಲಿ ಬೊಮ್ಮಾಯಿಯವರನ್ನೂ ವಿಜಯೇಂದ್ರ ಗಣನೆಗೆ ತಗೊಂಡಿಲ್ಲ. ಡಿವಿಎಸ್, ಅಶೋಕ್, ಅಶ್ವಥನಾರಾಯಣರನ್ನು ಗಣನೆಗೆ ತಗೊಳ್ಳದೇ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿಜಯೇಂದ್ರ ಪರ 80% ಶಾಸಕರು ಇದ್ದಾರೆ ಎಂದು ಹೇಳುತ್ತಾರೆ. ಹಾಗಾದ್ರೆ ಆಂತರಿಕ ಪ್ರಜಾಪ್ರಭುತ್ವದಂತೆ ಯಾಕೆ ತೀರ್ಮಾನ ಆಗಿಲ್ಲ? ಮೋದಿಯವರೇ ಮೂರನೇ ಸಲ ಪ್ರಧಾನಿ ಆದ್ರು ಎಷ್ಟು ಸೌಜನ್ಯದಿಂದ ವರ್ತಿಸ್ತಾರೆ. ಸಣ್ಣ ಕಾರ್ಯಕರ್ತನ ಜತೆಗೂ ಮೋದಿಯವರು ಸೌಜನ್ಯದಿಂದ ಮಾತಾಡ್ತಾರೆ. ವಿಜಯೇಂದ್ರಗೆ ಆ ಸೌಜನ್ಯ ಇಲ್ಲವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಸಿಎಂ ನನಗೆ ಆಪ್ತರು, ನಿನ್ನ ಉಪಯೋಗಿಸಿ ನಡುನೀರಲ್ಲಿ ಬಿಡ್ತಾರೆ ಕಣಯ್ಯ ಅಂದಿದ್ರು ಎಂದು ಇದೇ ವೇಳೆ ಹಿಂದೆ ಸಿದ್ದರಾಮಯ್ಯ ಹೇಳಿದ್ದ ಮಾತನ್ನ ನೆನಪಿಸಿಕೊಂಡಿದ್ದಾರೆ.