ಬೆಂಗಳೂರು: 20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನೂತನ ಸಂಸದ ಡಾ.ಕೆ.ಸುಧಾಕರ್ ಗೆ (Dr Sudhakar) ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬಾಡೂಟದ ಜೊತೆಯಲ್ಲಿ ಮದ್ಯ ಹಂಚಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಚಿಕ್ಕಬಳ್ಳಾಪರ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಮಾತನಾಡಿದ ಡಾ.ಕೆ.ಸುಧಾಕರ್, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ಘಟನೆ ಬಗ್ಗೆ ತಿಳಿಯಿತು. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ರು ಎಂದರು.
ನಾನು ಹಾಗೂ ಆರ್ ಆಶೋಕ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಭೆಯಲ್ಲಿ ಮಾತನಾಡಿ ಬಂದೆ. ಆದರೆ ಮದ್ಯ ಹಂಚಿಕೆ ಮಾಡಿದ್ದು ಆಯೋಜಕರಾ..? ಅಥವಾ ಅಲ್ಲಿ ಬಂದಿದ್ದೇವರೇ ಸೇವನೆ ಮಾಡಿದ್ರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ- ಅಭ್ಯರ್ಥಿ ವಿಚಾರದಲ್ಲಿ ದೋಸ್ತಿಗಳ ಮಧ್ಯೆ ಭಿನ್ನಾಭಿಪ್ರಾಯ
ನಮ್ಮದೇ ಕಾರ್ಯಕರ್ತರು ಮದ್ಯ ಹಂಚಿಕೆ ಮಾಡಿದ್ರೆ ಅದು ತಪ್ಪು. 20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ, ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ, ನನಗೂ ನೋವಾಗಿದೆ ಇದು ಅಕ್ಷಮ್ಯ ಅಪರಾಧ ಎಂದರು.