ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸಂಪುಟ ದರ್ಜೆ ಸಚಿವರಾಗಿ 8 ಮಂದಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಸಂಪುಟ ದರ್ಜೆ ಸಚಿವರಾಗಿ ಪರಮೇಶ್ವರ್, ಪ್ರಿಯಾಂಕ ಖರ್ಗೆ, ಜಮೀರ್ ಅಹಮದ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಇವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (ThawarChand Gehlot) ಪ್ರಮಾಣ ವಚನ ಬೋಧಿಸಿದರು. ಆದರೆ ಇವರುಗಳಿಗೆ ಖಾತೆ ಹಂಚಿಕೆ ಮಾಡಿಲ್ಲ. ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು ಸಿಎಂ ಆಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದನ್ನೂ ಓದಿ: ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ
ಸಮಾರಂಭದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಸ್ಟಾಲಿನ್, ನಟ ಕಮಲ್ ಹಾಸನ್, ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಜೇಂದ್ರ ಸಿಂಗ್ ಬಾಬು, ದುನಿಯಾ ವಿಜಯ್, ನಟಿ ರಮ್ಯಾ, ಭಾವನಾ, ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.