– ರಾಜಸ್ಥಾನದ ಆಶ್ರಮದಲ್ಲಿ ಆರ್ಚಕನಂತೆ ಪತ್ತೆಯಾದ ನರ ರಾಕ್ಷಸ
– ಹತ್ಯೆ ಮಾಡಿ ಹೆಣಗಳನ್ನು ಮೊಸಳೆಗಳಿಗೆ ನೀಡುತ್ತಿದ್ದ ಪಾಪಿ!
– ಕಿಡ್ನಿ ರಾಕೆಟ್‌ನಲ್ಲೂ ಸಿಲುಕಿದ್ದ ಹಂತಕ
ಜೈಪುರ್: 50 ಜನರನ್ನು ಭೀಕರವಾಗಿ ಹತ್ಯೆ ಮಾಡಿ ಪೊಲೀಸ್ ದಾಖಲೆಗಳಲ್ಲಿ ‘ಡಾಕ್ಟರ್ ಡೆತ್’ (Dr Death) ಎಂದು ಕುಖ್ಯಾತಿ ಪಡೆದಿದ್ದ ಸರಣಿ ಹಂತಕನನ್ನು ದೆಹಲಿ ಪೊಲೀಸರು (Delhi Police ) ರಾಜಸ್ಥಾನದಲ್ಲಿ (Rajasthan) ಬಂಧಿಸಿದ್ದಾರೆ.
ಬಂಧಿತ ಸರಣಿ ಹಂತಕನನ್ನು ಡಾ. ದೇವೇಂದರ್ ಶರ್ಮಾ (67) (Dr.Devender Sharma) ಎಂದು ಗುರುತಿಸಲಾಗಿದೆ. ಈತ ಆಗಸ್ಟ್ 2023 ರಲ್ಲಿ ಪೆರೋಲ್ ಪಡೆದು ತಲೆಮರೆಸಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ರಾಜಸ್ಥಾನದ ದೌಸಾದ ಆಶ್ರಮವೊಂದರಲ್ಲಿ ಅರ್ಚಕನಾಗಿ ಸೇರಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರ್ಮಾ ರಾಜಸ್ಥಾನದ ಬಂಡಿಕುಯಿಯಲ್ಲಿರುವ ಜಂತ ಕ್ಲಿನಿಕ್‌ನಲ್ಲಿ 11 ವರ್ಷಗಳ ಕಾಲ ಆಯುರ್ವೇದ ವೈದ್ಯನಾಗಿ ಕೆಲಸ ಮಾಡಿದ್ದ. 1994 ರಲ್ಲಿ, ಅನಿಲ ಎಜೆನ್ಸಿ ತೆರೆಯಲು ಪ್ರಯತ್ನಿಸಿದ್ದ. ಈ ವೇಳೆ ಆತನಿಗೆ 11 ಲಕ್ಷ ರೂ.ಗಳನ್ನು ವಂಚಿಸಲಾಗಿತ್ತು. ಬಳಿಕ ಅಲ್ಲಿಂದ ಅಲಿಘರ್‌ನ ಮನೆಗೆ ಮರಳಿ, ಅಲ್ಲಿ ನಕಲಿ ಅನಿಲ ಏಜೆನ್ಸಿಯನ್ನು ನಡೆಸುತ್ತಿದ್ದ. ಈ ಸಮಯದಲ್ಲಿ ಬೇರೆ ಕಡೆಗಳಿಗೆ ಸಾಗಿಸುತ್ತಿದ್ದ ಅನಿಲ ಸಿಲಿಂಡರ್‌ಗಳನ್ನು ಕದಿಯಲು ಟ್ರಕ್ ಚಾಲಕರನ್ನು ಕೊಲೆ ಮಾಡುತ್ತಿದ್ದ. ಬಳಿಕ ಶವಗಳನ್ನು ನದಿಗಳಿಗೆ ಎಸೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
1998 ಮತ್ತು 2004ರ ಅವಧಿಯಲ್ಲಿ ಶರ್ಮಾ ಅಕ್ರಮ ಮೂತ್ರಪಿಂಡ ಕಸಿ ದಂಧೆಯಲ್ಲಿ ಭಾಗಿಯಾಗಿದ್ದ. ದೆಹಲಿ, ಹರಿಯಾಣ ಮತ್ತು ರಾಜಸ್ಥಾನದಾದ್ಯಂತ 125 ಕ್ಕೂ ಹೆಚ್ಚು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದ. ಮೂತ್ರಪಿಂಡ ದಾನಿಗಳನ್ನು ವ್ಯವಸ್ಥೆ ಮಾಡುವ ಮಧ್ಯವರ್ತಿಯಾಗಿ ಪ್ರತಿ ಕಸಿಗೆ 5 ರಿಂದ 7 ಲಕ್ಷ ರೂ.ಗಳನ್ನು ಗಳಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಇನ್ನೂ 2002 ಮತ್ತು 2004 ರ ನಡುವೆ, ಶರ್ಮಾ ಹಲವಾರು ಟ್ಯಾಕ್ಸಿ ಚಾಲಕರ ಅಪಹರಣ ಮಾಡಿ ಕೊಲೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಾ ದೆಹಲಿಯಿಂದ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು, ಚಾಲಕರನ್ನು ಕೊಂದು ಶವವನ್ನು ಕಾಸ್ಗಂಜ್‌ನ ಮೊಸಳೆಗಳಿಂದ ತುಂಬಿದ ಹಜ್ರಾ ಕಾಲುವೆಯಲ್ಲಿ ಎಸೆಯುತ್ತಿದ್ದ. ನಂತರ ಕದ್ದ ಟ್ಯಾಕ್ಸಿಗಳನ್ನು ಬೂದು ಮಾರುಕಟ್ಟೆಯಲ್ಲಿ ತಲಾ 20,000 ರಿಂದ 25,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿ 21 ಟ್ಯಾಕ್ಸಿ ಚಾಲಕರ ಕೊಲೆಗಳ ಆರೋಪ ಹೊರಿಸಿದ್ದರು. ನಂತರ ಶರ್ಮಾ 50ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಹತ್ಯೆಗೀಡಾದವರ ಶವಗಳನ್ನು ಪತ್ತೆ ಮಾಡಲು ಸಾಧ್ಯವಾಗದ ಕಾರಣ, ಕೇವಲ ಏಳು ಕೊಲೆಗಳಿಗೆ ಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕೆಲವು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೂ ಆದೇಶಿಸಲಾಗಿತ್ತು. ಇನ್ನೂ ಅಪರಾಧ ಸಾಭೀತಾದ ಬಳಿಕ ಆತನ ಪತ್ನಿ ಮತ್ತು ಮಕ್ಕಳು ಅವನಿಂದ ದೂರವಾಗಿದ್ದರು.
ಜನವರಿ 2020 ರಲ್ಲಿ, ಹಂತಕ ಶರ್ಮಾನನ್ನು ಉತ್ತಮ ನಡವಳಿಕೆಯ ಆಧಾರದ ಮೇಲೆ ಜೈಪುರ ಕೇಂದ್ರ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ಆಗಲೂ ಆತ ತಲೆಮರೆಸಿಕೊಂಡಿದ್ದ. ಕೆಲವು ತಿಂಗಳ ಬಳಿಕ ಪೊಲೀಸರು ಅಪರಾಧಿಗಳ ಬಗ್ಗೆ ಮಾಹಿತಿ ಕಲೆ ಹಾಕುವಾಗ ಶರ್ಮಾ, ಎರಡನೇ ಹೆಂಡತಿಯೊಂದಿಗೆ ಬಾಪ್ರೋಲಾದಲ್ಲಿ ವಾಸಿಸುತ್ತಿರುವುದು ತಿಳಿದು ಬಂದಿತ್ತು. ಈ ವೇಳೆ ಆತ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿಕೊಂಡಿದ್ದ. ವಿವಾದಿತ ಕಟ್ಟಡ ಮಾರಾಟದಲ್ಲಿ ತೊಡಗಿದ್ದ ವೇಳೆಯೇ ಆತನನ್ನು ಬಂಧಿಸಿ ಪೊಲೀಸರು ತಿಹಾರ್ ಜೈಲಿಗಟ್ಟಿದ್ದರು. ಸ್ವಲ್ಪ ವರ್ಷಗಳ ಕಾಲ ಜೈಲಲ್ಲಿದ್ದ ಶರ್ಮಾಗೆ 2023ರಲ್ಲಿ ಎರಡು ತಿಂಗಳ ಪೆರೋಲ್ ನೀಡಲಾಯಿತು, ಇದಾದ ಬಳಿಕ ಮತ್ತೆ ಆತ ತಲೆಮರೆಸಿಕೊಂಡಿದ್ದ.
ಹಂತಕನ ಪತ್ತೆಗೆ ಜೈಪುರ, ದೆಹಲಿ, ಅಲಿಗಢ, ಆಗ್ರಾ ಮತ್ತು ಪ್ರಯಾಗ್‌ರಾಜ್ ಸೇರಿದಂತೆ ಎಲ್ಲಾ ಸಂಭಾವ್ಯ ಅಡಗುತಾಣಗಳಲ್ಲಿ ಆರು ತಿಂಗಳ ಕಾಲ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಕೊನೆಗೆ ರಾಜಸ್ಥಾನದ ದೌಸಾದ ಆಶ್ರಮದಲ್ಲಿ ಅರ್ಚಕನ ವೇಷದಲ್ಲಿ ಅಡಗಿಕೊಂಡಿದ್ದು ಪತ್ತೆಯಾಗಿತ್ತು. ಪೊಲೀಸರ ತಂಡವು ಅಲ್ಲಿ ಮೊಕ್ಕಾಂ ಹೂಡಿ, ಆತನ ಅನುಯಾಯಿಯಂತೆ ನಟಿಸಿ ಬಂಧಿಸಿದ್ದಾರೆ. ಬಂಧನದ ಬಳಿಕ ಆತ ತನ್ನೆಲ್ಲಾ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಮತ್ತೆ ಜೈಲಿಗೆ ವಾಪಸ್ ಆಗಬಾರದು ಎಂದೇ ಪೆರೋಲ್ ಪಡೆದು ಪರಾರಿಯಾಗಿದ್ದೆ ಎಂದು ಹೇಳಿಕೊಂಡಿದ್ದಾನೆ.
ಶರ್ಮ ಕೊಲೆ, ಅಪಹರಣ ಮತ್ತು ದರೋಡೆ ಸೇರಿದಂತೆ 27 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆತನನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.