ರಾಯಚೂರು: ಕಥೆಗಾರರ ಕಲ್ಪನೆಗೆ ನಿಲುಕದ ವಸ್ತು ವಿಷಯಗಳೇ ಇಲ್ಲ. ಆದರೆ ಒಂದೇ ವಸ್ತುವನ್ನಿಟ್ಟುಕೊಂಡು ಮೂವರು ಹೆಸರಾಂತ ಕಥೆಗಾರರು ಮೂರು ಕತೆಗಳ ಕಥಾ ಸಂಕಲನವನ್ನ ಬಿಡುಗಡೆ ಮಾಡಿರುವುದು ಬಹುಶಃ ಇದೇ ಮೊದಲಿರಬಹುದು. ಮೂಲತಃ ರಾಯಚೂರು ಜಿಲ್ಲೆಯವರಾದ ಡಾ.ಅಮರೇಶ್ ನುಗಡೋಣಿ, ಮಹಾಂತೇಶ್ ನವಲಕಲ್ ಹಾಗೂ ಚಿದಾನಂದ ಸಾಲಿ ಇಂತಹ ವಿನೂತನ ಪ್ರಯತ್ನಕ್ಕೆ ಮುಂದಾಗಿ “ಕಾಗೆ “ಒಂದು ದೃಶ್ಯ ಮೂರು ಸ್ಪರ್ಶ ಕಥಾಸಂಕಲನವನ್ನ ಬಿಡುಗಡೆ ಮಾಡಿದ್ದಾರೆ.
ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದಲನ ಕಥಾಸಂಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಇಂದು ಪುಸ್ತಕ ಲೋಕಾರ್ಪಣೆ ಮಾಡಿದರು.
Advertisement
Advertisement
ಕಾಗೆ ಹೇಗೆ ಸ್ಫೂರ್ತಿ?
ಕಲಬುರ್ಗಿ ರೈಲ್ವೇ ನಿಲ್ದಾಣದಲ್ಲಿ ಒಂದು ದಿನ ಈ ಮೂರು ಜನ ಕತೆಗಾರರು ಕುಳಿತಿದ್ದಾಗ ಒಂದು ವಿಲಕ್ಷಣ ಘಟನೆ ನಡೆಯುತ್ತದೆ. ಅಲ್ಲೇ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬನ ಹೆಗಲ ಮೇಲೆ ಕಾಗೆಯೊಂದು ಬಂದು ಕುಳಿತುಕೊಳ್ಳುತ್ತದೆ. ಅವನು ಕಾಗೆಯನ್ನ ಓಡಿಸದೇ ಸುಮ್ಮನೆ ಕುಳಿತುಕೊಳ್ಳುತ್ತಾನೆ. ಈ ಘಟನೆ ಕತೆಗಾರರನ್ನ ಚಕಿತಗೊಳಿಸುತ್ತದೆ. ಆಗಲೇ ಕತೆಗಾರರು ಈ ಮೂರು ಜನ ಹಾಗೂ ಘಟನೆಯನ್ನ ಆಧರಿಸಿ ಕತೆ ಬರೆಯಲು ನಿರ್ಧರಿಸುತ್ತಾರೆ. ಘಟನೆ ಒಂದೆಯಾದರೂ ಮೂರು ಜನ ಮೂರು ಕತೆಗಳ ಮೂಲಕ ಕಾಗೆ ಸಂಕಲನವನ್ನ ಹೊರತಂದಿದ್ದಾರೆ.
Advertisement
ಕಥಾಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದ ಹಂಪಿ ಕನ್ನಡ ವಿವಿ ಸಹ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಕಾಗೆ ಒಂದು ಅಪಶಕುನದ ಪಕ್ಷಿ ಅಂತಲೇ ಗುರುತಿಕೊಂಡಿದ್ದರು. ಅದರ ಮೂಲಕ ಸಮಾಜದ ಹಿಂಸೆ, ಮುಖವಾಡಗಳು, ವ್ಯಕ್ತಿಗಳು, ವ್ಯಕ್ತಿತ್ವ ಅನಾವರಣ ಕತೆಗಳಲ್ಲಿ ಮೂಡಿಬಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ್ ನಾಗಡದಿನ್ನಿ, ಪ್ರಕಾಶಕ ಪಲ್ಲವ ವೆಂಕಟೇಶ್, ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ ಸೇರಿ ಹಲವರು ಭಾಗವಹಿಸಿದ್ದರು.