ಪಾಟ್ನಾ: ವರದಕ್ಷಿಣೆಗಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಬಿಹಾರದ ಇಸ್ಲಾಂಪುರದದಲ್ಲಿ ನಡೆದಿದೆ.
ವಿಭಾ ಕುಮಾರಿ ಮೃತಪಟ್ಟ ಮಹಿಳೆ. ಮೂರು ವರ್ಷಗಳ ಹಿಂದೆ ವಿಭಾ, ರಾಜೇಶ್ ರವಿದಾಸ್ ಎಂಬವನನ್ನು ಮದುವೆಯಾಗಿದ್ದಳು. 6 ತಿಂಗಳ ಹಿಂದೆ ವಿಭಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಎರಡು ದಿನದಲ್ಲೇ ಆ ಮಗು ಮೃತಪಟ್ಟಿತ್ತು.
ಮದುವೆಯಾದ ನಂತರ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಒಂದೂವರೆ ಲಕ್ಷ ನಗದು, ಚಿನ್ನದ ಸರ ಹಾಗೂ ಉಂಗುರವನ್ನು ವರದಕ್ಷಿಣೆಯಾಗಿ ತರುವಂತೆ ವಿಭಾ ಕುಮಾರಿಗೆ ಕಿರುಕುಳ ನೀಡುತ್ತಿದ್ದರು. ವಿಭಾ ವರದಕ್ಷಿಣೆ ತರದಿದ್ದಾಗ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಆಕೆಯನ್ನು ಕೊಲೆ ಮಾಡಿದ್ದಾರೆ.
ವಿಭಾ ಪೋಷಕರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ವಿಭಾ ಅರ್ಧ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮಹಿಳೆಯ ಮೃತದೇಹವನ್ನು ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಪೊಲೀಸರಿಗೆ ವಿಭಾ ಕೊಲೆ ಪ್ರಕರಣ ತಿಳಿಯುತ್ತಿದ್ದಂತೆ ರಾಜೇಶ್ ಹಾಗೂ ಆತನ ಕುಟುಂಬಸ್ಥರು ಪರಾರಿಯಾಗಿದ್ದಾರೆ.